ಕುಂದಾಪುರ : ಆಗಸ್ಟ್26: ವಂಡ್ಸೆ ಹೋಬಳಿಯ ನೆಂಪು ಬಳಿಯ ಕೆಂಚನೂರಿನಲ್ಲಿ ಭಾರೀ ಗಾಳಿ, ಮಳೆಯಾಗಿದ್ದು, ಮರವೊಂದು ಬಿದ್ದು ಮಹಿಳೆ ಮತ್ತು ದನ ಮೃತಪಟ್ಟಿರುವ ಘಟನೆ ಆ. 25ರಂದು ಸಂಜೆ 6 ಗಂಟೆ ಸುಮಾರಿಗೆ ಸಂಭವಿಸಿದೆ.
ಮಹಿಳೆಯು ಮನೆ ಸಮೀಪ ಮೇಯಲು ಕಟ್ಟಿರುವ ದನವನ್ನು ತರಲು ಬಂದಿದ್ದಾಗ ಮರ ಬುಡಸಹಿತ ಆಕೆಯ ಮೇಲೆ ಬಿದ್ದಿದೆ.ಕೆಂಚನೂರು ಗ್ರಾಮದ ಮಲ್ಲಾರಿ ನಿವಾಸಿ ಅಣ್ಣಪ್ಪಯ್ಯ ಆಚಾರ್ಯ ಅವರ ಪತ್ನಿ ಸುಜಾತಾ ಆಚಾರ್ಯ(44) ಮೃತಪಟ್ಟವರು.
ಸ್ಥಳಕ್ಕೆ ಆಗಮಿಸಿದ ಗ್ರಾ.ಪಂ.ಸದಸ್ಯರಾದ ರಾಜೀವ ಶೆಟ್ಟಿ ಹಾಗೂ ರವಿ ಗಾಣಿಗ, ಗ್ರಾಮಸ್ಥರು, ವಿವಿಧ ಸಂಘಟನೆ ಯುವಕರು ಜೆಸಿಬಿ ಬಳಸಿ ಮರ ತೆರವುಗೊಳಿಸಿದ್ದರು. ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮೀ, ಆರ್.ಐ. ರಾಘವೇಂದ್ರ, ಪೊಲೀಸ್ ಅಧಿ ಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಶಾಸಕ ಗುರುರಾಜ ಗಂಟಿಹೊಳೆ, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಬಿ.ಎಂ. ಸುಕುಮಾರ್ ಶೆಟ್ಟಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಸುಜಾತಾರದ್ದು ಕಡು ಬಡ ಕುಟುಂಬ. ಅಣ್ಣಪ್ಪಯ್ಯ ಆಚಾರ್ಯ ಅಂಗಡಿ ಮಾಡಿಕೊಂಡಿದ್ದು, ನಷ್ಟ ಅನುಭವಿಸಿದ ಕಾರಣ ನಿತ್ಯ ಜೀವನಕ್ಕೆ ದಿನಕೂಲಿ ಕೆಲಸವನ್ನು ಅವಲಂಬಿಸಿದ್ದರು. ಓರ್ವ ಪುತ್ರ ಉದ್ಯೋಗ ವಿಲ್ಲದೆ ಮನೆಯಲ್ಲಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಇತ್ತೀಚೆಗೆ ಖಾಸಗಿ ಶಾಲೆ ಶಿಕ್ಷಕಿಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಸುಗಳ ಹಾಲನ್ನು ಮಾರಿ ಅಷ್ಟಿಷ್ಟು ಹಣ ಸಂಪಾದಿಸುತ್ತಿದ್ದರು. ಅಣ್ಣಪ್ಪಯ್ಯ ಮಲ್ಲಾರಿಯಲ್ಲಿ ಜಾಗ ಖರೀದಿಸಿ ಮನೆ ಕಟ್ಟಿ ಬದುಕು ನಡೆಸುವ ಕನಸು ಕಂಡಿದ್ದರು. ದುಡಿದ ಹಣವನ್ನು ಮನೆ ಕಟ್ಟಲು ಬಳಸುತ್ತಿದ್ದರು. ಈ ದುರ್ಘಟನೆಯಿಂದಾಗಿ ಈಗ ಕುಟುಂಬ ಕಂಗಾಲಾಗಿದೆ.