ಮಂಗಳೂರು : ಆಗಸ್ಟ್ 18:ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಬೆಳ್ತಂಗಡಿ ವನ್ಯಜೀವಿ ವಲಯ ವ್ಯಾಪ್ತಿಯ ‘ನೇತ್ರಾವತಿ ಪೀಕ್ ಪ್ರದೇಶ’ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಾರಣಕ್ಕೆ ವಿಧಿಸಿದ್ದ ನಿಷೇಧವನ್ನು ಜಿಲ್ಲಾ ಆಡಳಿತ ವಾಪಸ್ ಪಡೆದಿದೆ.
ಜಿಲ್ಲೆಯ ಗಿರಿತಾಣ/ಶಿಖರಗಳ ಚಾರಣವನ್ನು ಹಾಗೂ ಹೋಂ ಸ್ಟೇ, ರೆಸಾರ್ಟ್, ಅರಣ್ಯ ಇಲಾಖೆಯಿಂದ ಕೈಗೊಳ್ಳುವ ಚಾರಣ-ಸಾಹಸ ಚಟುವಟಿಕೆಗಳನ್ನು ಅಗತ್ಯ ಮುಂಜಾಗೃತಾ ಕ್ರಮಗಳೊಂದಿಗೆ ನಡೆಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ವ್ಯಾಪಕ ಮಳೆಯ ಕಾರಣ ಭೂಕುಸಿತ, ಗುಡ್ಡ ಕುಸಿತ, ಸಿಡಿಲು, ಮರಬೀಳುವಂತಹ ದುರ್ಘಟನೆಗಳು ನಡೆಯುವ ಸಾಧ್ಯತೆ ಇರುವ ಕಾರಣಕ್ಕೆ ನಾಗರಿಕರ ಸುರಕ್ಷತೆಗಾಗಿ ಚಾರಣ ಮತ್ತಿತರ ಚಟುವಟಿಕೆಗಳಿಗೆ ನಿಷೇಧ ಹೇರಲಾಗಿತ್ತು. ಈಗ ಅರಣ್ಯ ಇಲಾಖೆಯ ಕೋರಿಕೆ ಮೇರೆಗೆ ನಿಷೇಧ ವಾಪಸ್ ಪಡೆಯಲಾಗಿದೆ ಎಂದು ಅವರು ಹೇಳಿದ್ದಾರೆ.