ಉಡುಪಿ :ಆಗಸ್ಟ್ 13 :ಆಟಿಡೊಂಜಿ ಕೂಟ ಕಾರ್ಯಕ್ರಮದಿಂದ ಆಟಿ ತಿಂಗಳ ವೈಶಿಷ್ಟ್ಯ ಮತ್ತು ತುಳುನಾಡಿನ ಗತ ಸಾಂಸ್ಕೃತಿಕ ವೈಭವವನ್ನು ಇಂದಿನ ಪೀಳಿಗೆಗೆ ಪರಿಚಯಿಸಿದಂತಾಗುತ್ತದೆ ಎಂದು ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಗೌರವಾಧ್ಯಕ್ಷ ಗೋಪಾಲ್ ಸಿ. ಬಂಗೇರ ಹೇಳಿದರು.
ಅವರು ಬಿಲ್ಲವ ಸೇವಾ ಸಂಘ(ರಿ.), ಶ್ರೀ ವಿಠೋಬ ಭಜನಾ ಮಂದಿರ ಅಂಬಲಪಾಡಿ ಇದರ ಆಶ್ರಯದಲ್ಲಿ ಸಂಘದ ಮಹಿಳಾ ಘಟಕದ ವತಿಯಿಂದ ಸಂಘದ ಅಧ್ಯಕ್ಷ ಶಿವಕುಮಾರ್ ಅಂಬಲಪಾಡಿ ಅವರ ಅಧ್ಯಕ್ಷತೆಯಲ್ಲಿ ಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ನಡೆದ ‘ಆಟಿಡೊಂಜಿ ಕೂಟ’ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಉಡುಪಿ ಅಜ್ಜರಕಾಡು ಡಾ! ಜಿ. ಶಂಕರ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥೆ ಡಾ! ನಿಕೇತನ ಅವರು ಆಟಿ ತಿಂಗಳ ಆಚಾರ-ವಿಚಾರ ಮತ್ತು ಜೀವನ ಪದ್ಧತಿಯ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.
ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರ ಉಡುಪಿ ಇದರ ಆರ್ಥಿಕ ಸಮಾಲೋಚಕಿ ಮೀರಾ ಬ್ರಹ್ಮಾವರ ಅವರು ಬ್ಯಾಂಕ್ ಮೂಲಕ ದೊರೆಯುವ ಸರಕಾರದ ವಿವಿಧ ಸೌಲಭ್ಯಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದ ಡಾ! ನಿಕೇತನ ಮತ್ತು ಮೀರಾ ಬ್ರಹ್ಮಾವರ ಅವರನ್ನು ಸಂಘದ ಆಡಳಿತ ಸಮಿತಿ ಮತ್ತು ಮಹಿಳಾ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಸುಮಾರು 30ಕ್ಕೂ ಮಿಕ್ಕಿ ಆಟಿ ತಿಂಗಳ ವೈವಿಧ್ಯಮಯ ಖಾದ್ಯಗಳನ್ನು ತಯಾರಿಸಿದ ಮಹಿಳಾ ಘಟಕದ ಸದಸ್ಯರನ್ನು ಗುಲಾಬಿ ಹೂ ನೀಡಿ ಅಭಿನಂದಿಸಲಾಯಿತು. ಮಹಿಳಾ ಘಟಕದ ಕಾರ್ಯದರ್ಶಿ ವಾಣಿಶ್ರೀ ಅರುಣ್ ಕುಮಾರ್ ಸದಸ್ಯರ ಯಾದಿಯನ್ನು ವಾಚಿಸಿದರು.
ಮಹಿಳಾ ಘಟಕದ ಸಂಚಾಲಕಿ ಗೋಧಾವರಿ ಎಮ್. ಸುವರ್ಣ ಮತ್ತು ಗೌರವ ಸಂಚಾಲಕಿ ವಿಜಯಾ ಜಿ. ಬಂಗೇರ ಮಾತನಾಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಸಂಘದ ಆಡಳಿತ ಸಮಿತಿ ಮತ್ತು ಮಹಿಳಾ ಘಟಕದ ಸದಸ್ಯರನ್ನು ಅಭಿನಂದಿಸಿದರು.
ಸಂಘದ ಅಧ್ಯಕ್ಷ ಶಿವಕುಮಾರ್ ಅಂಬಲಪಾಡಿ ಮಾತನಾಡಿ ಸಂಘದ ಆಶ್ರಯದಲ್ಲಿ ಮಹಿಳಾ ಘಟಕದ ವತಿಯಿಂದ ನಡೆಯುತ್ತಿರುವ ಆಟಿಡೊಂಜಿ ಕೂಟ ಕಾರ್ಯಕ್ರಮ ಸಂಘದ ಸದಸ್ಯರಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಸಿದೆ. ಇದು ನಮ್ಮ ಹಿರಿಯರೆಲ್ಲರನ್ನೂ ನೆನಪಿಸಿಕೊಳ್ಳುವ ಭಾವನಾತ್ಮಕ ಕ್ಷಣವೂ ಹೌದು ಎಂದರು.
ಸಂಘದ ಉಪಾಧ್ಯಕ್ಷ ಶಿವದಾಸ್ ಪಿ., ಪ್ರಧಾನ ಕಾರ್ಯದರ್ಶಿ ರಾಜೇಶ್, ಕೋಶಾಧಿಕಾರಿ ದಯಾನಂದ್ ಎ, ಮಹಿಳಾ ಘಟಕದ ಸಹ ಸಂಚಾಲಕಿಯರಾದ ದೇವಕಿ ಕೆ. ಕೋಟ್ಯಾನ್ ಮತ್ತು ಜಯಂತಿ ಹರೀಶ್ ಹಾಗೂ ಸಂಘದ ಆಡಳಿತ ಸಮಿತಿ ಮತ್ತು ಮಹಿಳಾ ಘಟಕದ ಪದಾಧಿಕಾರಿಗಳು, ಸಮಿತಿ ಸದಸ್ಯರು, ಸಂಘದ ಸದಸ್ಯರು ಹಾಗೂ ಮಹಿಳಾ ಘಟಕ ಮತ್ತು ಶ್ರೀ ಗುರು ಕುಣಿತ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಮಹಿಳಾ ಘಟಕದ ಸಮಿತಿ ಸದಸ್ಯೆಯರಾದ ವಿಜಯ ಕೃಷ್ಣ ಮತ್ತು ಪ್ರಭಾ ದಯಾನಂದ್ ಕಾರ್ಯಕ್ರಮ ನಿರೂಪಿಸಿ, ಅನಿತಾ ಲಕ್ಷ್ಮಣ್ ವಂದಿಸಿದರು.
ರೀಶಾ ಪ್ರಾರ್ಥನೆ ಹಾಡಿದರು. ಅನ್ವಿ ಮತ್ತು ಶ್ರೀ ಗುರು ಮಹಿಳಾ ಕುಣಿತ ಭಜನಾ ಮಂಡಳಿಯ ಸದಸ್ಯೆಯರಿಂದ ನೃತ್ಯ ಪ್ರದರ್ಶನ ಹಾಗೂ ಆಟಿ ತಿಂಗಳ ವಿವಿಧ ಖಾಧ್ಯಗಳೊಂದಿಗೆ ಸಾಮೂಹಿಕ ಸಹ ಭೋಜನ ನಡೆಯಿತು.