ಪ್ಯಾರಿಸ್:ಆಗಸ್ಟ್ 11: ಪ್ಯಾರಿಸ್ ಒಲಿಂಪಿಕ್ಸ್ಗೆ ಇಂದು (ಆ.11) ತೆರೆ ಬೀಳಲಿದೆ. ಸ್ಟೇಟ್ ಡಿ ಫ್ರಾನ್ಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಎಲ್ಲಾ ದೇಶಗಳ ಆಯ್ದ ಕ್ರೀಡಾಪಟುಗಳು ಕಾಣಿಸಿಕೊಳ್ಳಲಿದ್ದಾರೆ.
ಭಾರತೀಯ ಕಾಲಮಾನ 12.30 AM ಗೆ ಶುರುವಾಗಲಿರುವ ಈ ಸಮಾರಂಭದಲ್ಲಿ ಭಾರತದ ಧ್ವಜಧಾರಿಗಳಾಗಿ ಹಾಕಿ ತಂಡದ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಹಾಗೂ ಶೂಟರ್ ಮನು ಭಾಕರ್ ಕಾಣಿಸಿಕೊಳ್ಳಲಿದ್ದಾರೆ
ಈ ಸಮಾರಂಭದಲ್ಲಿ “ನೂರಕ್ಕೂ ಹೆಚ್ಚು ಪ್ರದರ್ಶಕರು, ಅಕ್ರೋಬ್ಯಾಟ್ಗಳು, ನೃತ್ಯಗಾರರು ಮತ್ತು ಸರ್ಕಸ್ ಕಲಾವಿದರು” ಭಾಗವಹಿಸಲಿದ್ದಾರೆ ಎಂದು ಸಂಘಟಕರ ಹೇಳಿಕೆಯಲ್ಲಿ ತಿಳಿಸಲಾಗಿದೆ. ಹಾಗೆಯೇ ಅಂತಿಮ ಕಾರ್ಯಕ್ರಮದಲ್ಲಿ ಸಂಗೀತ ಪ್ರದರ್ಶನಗಳು ಇರಲಿವೆ.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕಾಗಿ ಪದಕ ಗೆದ್ದವರು:
ಮನು ಭಾಕರ್: ಮಹಿಳೆಯರ 10 ಮೀ ಏರ್ ಪಿಸ್ತೂಲ್- ಕಂಚು
ಮನು ಭಾಕರ್, ಸರಬ್ಜೋತ್ ಸಿಂಗ್: 10 ಮೀ ಏರ್ ಪಿಸ್ತೂಲ್ (ಮಿಶ್ರ ತಂಡ)- ಕಂಚು
ಸ್ವಪ್ನಿಲ್ ಕುಸಾಲೆ: 50 ಮೀ ರೈಫಲ್ 3 ಸ್ಥಾನ- ಕಂಚು
ಟೀಮ್ ಇಂಡಿಯಾ: ಪುರುಷರ ಹಾಕಿ- ಕಂಚು
ನೀರಜ್ ಚೋಪ್ರಾ: ಪುರುಷರ ಜಾವೆಲಿನ್ ಥ್ರೋ- ಬೆಳ್ಳಿ
ಅಮನ್ ಸೆಹ್ರಾವತ್: ಪುರುಷರ ಕುಸ್ತಿ ಫ್ರೀಸ್ಟೈಲ್ 57 ಕೆ.ಜಿ- ಕಂಚು
ಶನಿವಾರದ ಪಂದ್ಯಗಳೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಅಭಿಯಾನ ಅಂತ್ಯವಾಗಿದೆ. ಈ ಬಾರಿ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದಿರುವುದು ಭಾರತದ ಸರ್ವಶ್ರೇಷ್ಠ ಸಾಧನೆ. ಹಾಗೆಯೇ ಶೂಟಿಂಗ್ನಲ್ಲಿ ಮನು ಭಾಕರ್ ಎರಡು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಒಟ್ಟು 6 ಪದಕಗಳೊಂದಿಗೆ ಭಾರತ ತಂಡವು ಪ್ಯಾರಿಸ್ ಒಲಿಂಪಿಕ್ಸ್ ಅಭಿಯಾನವನ್ನು ಅಂತ್ಯಗೊಳಿಸಿದೆ.