ಪ್ಯಾರಿಸ್ ಒಲಿಂಪಿಕ್ಸ್; ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ್ಕಾಗಿ ನಡೆದ ಪುರುಷರ ಹಾಕಿ ಪಂದ್ಯದಲ್ಲಿ ಭಾರತ ಹಾಕಿ ತಂಡ, ಸ್ಪೇನ್ ತಂಡವನ್ನು ಮಣಿಸಿ ಸತತ ಎರಡನೇ ಬಾರಿಗೆ ಕಂಚಿನ ಪದಕಕ್ಕೆ ಕೊರಳೊಡ್ಡಿದೆ. ಕಳೆದ ಬಾರಿಯ ಅಂದರೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡ ಜರ್ಮನಿಯನ್ನು ಮಣಿಸಿ ಕಂಚಿನ ಪದಕ ಗೆದ್ದಿತ್ತು. ತೀವ್ರ ರೋಚಕತೆಯಿಂದ ಕೂಡಿದ್ದ ಈ ಪಂದ್ಯದಲ್ಲಿ ಟೀಂ ಇಂಡಿಯಾ 2-1 ಗೋಲುಗಳಿಂದ ಸ್ಪೇನ್ ತಂಡವನ್ನು ಸೋಲಿಸಿತು.
ಟೀಂ ಇಂಡಿಯಾ ಪರ ಇಡೀ ಕ್ರೀಡಾಕೂಟದಲ್ಲಿ ಅಮೋಘ ಪ್ರದರ್ಶನ ನೀಡಿದ ನಾಯಕ ಹರ್ಮನ್ಪ್ರೀತ್ ಸಿಂಗ್, ಕಂಚಿನ ಪದಕದ ಪಂದ್ಯದಲ್ಲೂ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಈ ಪಂದ್ಯದಲ್ಲೂ ನಾಯಕ ಹರ್ಮನ್ಪ್ರೀತ್ ಸಿಂಗ್ ಎರಡೂ ಗೋಲುಗಳನ್ನು ಬಾರಿಸಿ ತಂಡವನ್ನು ಕಂಚಿನ ಪದಕ ಗೆಲ್ಲುವಂತೆ ಮಾಡಿದರು.
ಈ ಇಡೀ ಒಲಿಂಪಿಕ್ಸ್‌ನಲ್ಲಿ ಟೀಂ ಇಂಡಿಯಾದ ಈ ಅಮೋಘ ಪ್ರದರ್ಶನದಲ್ಲಿ ಇಬ್ಬರ ಪಾತ್ರ ಪ್ರಮುಖವಾಗಿತ್ತು. ಅದರಲ್ಲಿ ಒಬ್ಬರು ಕೊನೆಯ ಬಾರಿಗೆ ಭಾರತದ ಪರ ಆಡುತ್ತಿರುವ ಅನುಭವಿ ಗೋಲ್‌ಕೀಪರ್ ಪಿಆರ್ ಶ್ರೀಜೇಶ್. ಪಂದ್ಯಾವಳಿಯುದ್ದಕ್ಕೂ ಶ್ರೀಜೇಶ್, ಗೋಡೆಯಂತೆ ನಿಂತು ಎದುರಾಳಿಗಳ ಬೆಂಕಿ ಹೊಡೆತಗಳನ್ನು ತಡೆದು ತಂಡವನ್ನು ಸೋಲಿನಿಂದ ಪಾರು ಮಾಡಿದರು. ಎರಡನೇಯದ್ದಾಗಿ ತಂಡದ ನಾಯಕ ಹರ್ಮನ್ಪ್ರೀತ್ ಸಿಂಗ್ ಇಡೀ ಕ್ರೀಡಾಕೂಟದಲ್ಲಿ 10 ಗೋಲು ಬಾರಿಸಿ ತಂಡದ ಪರ ಶ್ರೇಷ್ಠ ಪ್ರದರ್ಶನ ನೀಡಿದರು. ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದ ನಾಯಕರಾಗಿದ್ದ ಹರ್ಮನ್‌ಪ್ರೀತ್ ಸಿಂಗ್, ತಂಡವನ್ನು ಕಂಚಿನ ಪದಕಕ್ಕೆ ಮುನ್ನಡೆಸಿದರು