ನವದೆಹಲಿ, ಆಗಸ್ಟ್ 08: ಪ್ಯಾರಿಸ್ ಒಲಿಂಪಿಕ್ಸ್ 2024ರಿಂದ ಅನರ್ಹಗೊಂಡ ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ನಿವೃತ್ತಿ ಘೋಷಣೆ ಮಾಡಿದ್ದಾರೆ. ಫೈನಲ್ ಪ್ರವೇಶಿಸಿದ ಬಳಿಕ ಅನರ್ಹಗೊಂಡಿದ್ದ ಅವರು ಬಹಳ ನೊಂದಿದ್ದರು. ಬುಧವಾರದ ಬೆಳವಣಿಗೆಗಳ ಬಳಿಕ ವಿನೇಶ್ ಫೋಗಟ್ ನಿವೃತ್ತರಾಗುವುದಾಗಿ ಹೇಳಿದ್ದಾರೆ.
ಹರ್ಯಾಣ ಮೂಲದ 29 ವರ್ಷದ ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತಕ್ಕೆ ಪದಕ ತಂದು ಕೊಡುವ ಭರವಸೆ ಮೂಡಿಸಿದ್ದರು. ಇದಕ್ಕೆ ಕೇವಲ ಒಂದು ಹೆಜ್ಜೆ ಬಾಕಿ ಇತ್ತು. 50 ಕೆಜಿ ಮಹಿಳಾ ಕುಸ್ತಿ ಅಖಾಡದಲ್ಲಿ ಫೈನಲ್ ಪ್ರವೇಶಿಸಿದ ಮೊದಲಿಗರು ಎಂಬ ಹೆಗ್ಗಳಿಕೆಯನ್ನು ಅವರು ಪಡೆದಿದ್ದರು.
ವಿನೇಶ್ ಫೋಗಟ್ ಗುರುವಾರ ಬೆಳಗ್ಗೆ ಟ್ವೀಟ್ ಮಾಡಿ ನಿವೃತ್ತಿ ಘೋಷಣೆ ಮಾಡಿದ್ದಾರೆ, “ಕ್ಷಮಿಸಿ, ನಿಮ್ಮ ಕನಸು, ನನ್ನ ಧೈರ್ಯ ಎಲ್ಲವೂ ಮರಿದು ಹೋಗಿದೆ. ಈಗ ನನಗೆ ಇದಕ್ಕಿಂತ ಹೆಚ್ಚಿನ ಶಕ್ತಿ ಇಲ್ಲ. 2021-2024 ಕುಸ್ತಿಗೆ ವಿದಾಯ. ನಿಮ್ಮೆಲ್ಲರಿಗೂ ನಾನು ಋಣಿಯಾಗಿರುತ್ತೇನೆ” ಎಂದು ಪೋಸ್ಟ್ ಹಾಕಿದ್ದಾರೆ.
ಆದರೆ ಬುಧವಾರ ನಡೆದ ಬೆಳವಣಿಗೆ ವಿನೇಶ್ ಫೋಗಟ್ ಮತ್ತು ಕೋಟ್ಯಾಂತರ ಭಾರತೀಯರಿಗೆ ನಿರಾಸೆ ಮೂಡಿಸಿತ್ತು. 50 ಕೆಜಿಗಿಂತ ಹೆಚ್ಚಿನ ತೂಕ ಹೊಂದಿದ ಕಾರಣಕ್ಕೆ ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್ 2024ರಿಂದ ಹೊರ ಬಿದ್ದಿದ್ದರು. ಫೈನಲ್‌ಗೆ ಪ್ರವೇಶ ಪಡೆದಿದ್ದ ಅವರು ಅನರ್ಹಗೊಂಡಿದ್ದರು.
ಫೈನಲ್ ಪಂದ್ಯಕ್ಕೂ ಮುನ್ನ ಕುಸ್ತಿಪಟುಗಳ ತೂಕ ಪರೀಕ್ಷೆ ಮಾಡಲಾಗುತ್ತದೆ. ಮಂಗಳವಾರ ವಿನೇಶ್ ಫೋಗಟ್ ಅವರ ತೂಕ 52 ಕೆಜಿಯಾಗಿತ್ತು. ಅದನ್ನು ಇಳಿಸಲು ಅವರು ರಾತ್ರಿಪೂರ್ತಿ ವಿವಿಧ ವ್ಯಾಯಾಮಗಳನ್ನು ಮಾಡಿದ್ದರು. ಬುಧವಾರ ಬೆಳಗ್ಗೆ ತೂಕ ಚೆಕ್ ಮಾಡಿದಾಗ 50 ಕೆಜಿಗಿಂತ 100 ಗ್ರಾಂ ತೂಕ ಹೆಚ್ಚಿತ್ತು. ಆದ್ದರಿಂದ ಒಲಿಂಪಿಕ್ಸ್‌ನಿಂದ ಅವರು ಅನರ್ಹ ಎಂದು ಘೋಷಣೆ ಮಾಡಲಾಯಿತು.
1 ಗಂಟೆ ಸಮಯ ನೀಡಿ ತೂಕ ಕಡಿಮೆ ಮಾಡಿಕೊಂಡು ಬರುತ್ತೇನೆ ಎಂದು ಮಾಡಿದ ಮನವಿಯನ್ನು ತಿರಸ್ಕಾರ ಮಾಡಲಾಗಿತ್ತು. ಇದರಿಂದಾಗಿ ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಪದಕ ಗೆಲ್ಲುವ ಆಸೆ ಹೊಂದಿದ್ದ ವಿನೇಶ್ ಫೋಗಟ್ ಮತ್ತು ಕೋಟ್ಯಾಂತರ ಭಾರತೀಯರಿಗೆ ನಿರಾಸೆಯಾಗಿತ್ತು. ರಾತ್ರಿಪೂರ್ತಿ ತೂಕ ಇಳಿಸಿಕೊಳ್ಳಲು ವ್ಯಾಯಾಮ ಮಾಡಿದ್ದ ವಿನೇಶ್ ಫೋಗಟ್ ಬಳಿಕ ಆಸ್ಪತ್ರೆಗೆ ದಾಖಲಾಗಿದ್ದರು.
ಬುಧವಾರದಂದು ಪ್ಯಾರಿಸ್ ಒಲಿಂಪಿಕ್ಸ್ 2024ರ 50 ಕೆಜಿ ವಿಭಾಗದ ಮಹಿಳೆಯರ ಫ್ರೀಸ್ಟೈಲ್ ಕುಸ್ತಿ ಫೈನಲ್‌ನಲ್ಲಿ ವಿನೇಶ್ ಫೋಗಟ್ ಪದಕ ಗೆಲ್ಲುವುದನ್ನು ಕಣ್ತುಂಬಿಕೊಳ್ಳಲು ಭಾರತೀಯಕರು ಕಾದು ಕುಳಿತಿದ್ದರು. ಆದರೆ ತೂಕದ ಕಾರಣಕ್ಕೆ ಅವರು ಅನರ್ಹಗೊಂಡಿದ್ದು, ಭಾರೀ ನಿರಾಸೆ ಮೂಡಿಸಿತ್ತು. ಅವರಿಗೆ ಆಡಲು ಅವಕಾಶ ನೀಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು.