ಬೆಂಗಳೂರು: ಆಗಸ್ಟ್ 07: ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ವಸತಿ ಸೌಲಭ್ಯ ನೀಡಲು ರಾಜ್ಯ ಸರಕಾರ ನಿರ್ಧರಿಸಿದೆ. ಇದಕ್ಕಾಗಿ ಶೂನ್ಯಬಡ್ಡಿದರದಲ್ಲಿ 2 ಲಕ್ಷ ರೂಪಾಯಿವರೆಗೆ ಸಾಲ ನೀಡಲು ಯೋಜಿಸಿದೆ.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಅಧ್ಯಕ್ಷತೆಯಲ್ಲಿ ಬುಧವಾರ ಬೆಂಗಳೂರಿನಲ್ಲಿ ನಡೆದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಆರ್ಥಿಕವಾಗಿ ಹಿಂದುಳಿದ ವರ್ಗದವರಿಗಾಗಿಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿ ವಿವಿಧ ವಸತಿ ಯೋಜನೆಗಳಿದ್ದು, ಅಂತಹ ಯೋಜನೆಗಳನ್ನೇ ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಕೊಡಲಾಗುತ್ತದೆ. ಕಾರ್ಮಿಕ ಮಂಡಳಿ ಯಲ್ಲಿ 8 ಸಾವಿರ ಕೋಟಿ ರೂ.ಗೂ ಹೆಚ್ಚಿನ ಹಣವಿದ್ದು, ಇದನ್ನು ಕಾರ್ಮಿಕರ ವಸತಿ ಯೋಜನೆಗೆ ಬಳಕೆ ಮಾಡಿಕೊಳ್ಳಬಹುದು ಎಂಬ ಸಲಹೆಗಳು ಸಭೆಯಲ್ಲಿ ವ್ಯಕ್ತವಾಗಿವೆ.
ಕೇಂದ್ರ ಸರಕಾರ 2ರಿಂದ 2.50 ಲಕ್ಷ ರೂ. ವರೆಗೆ ಫಲಾನುಭವಿಗಳಿಗೆ ನೆರವು ನೀಡಲಿದ್ದು, ಮಂಡಳಿ ವತಿಯಿಂದ 2 ಲಕ್ಷ ರೂ. ವರೆಗೆ ಶೂನ್ಯಬಡ್ಡಿದರದಲ್ಲಿ ಸಾಲ ನೀಡಲು ತೀರ್ಮಾನಿಸಿದೆ. ರಾಜ್ಯ ಸರಕಾರದ ಪಾಲಿನ ಜತೆಗೆ ಬಾಕಿ ಮೊತ್ತವನ್ನು ಫಲಾನುಭವಿ ಪಾವತಿಸಬೇಕಾಗುತ್ತದೆ. ನಿಗದಿತ ಗಡುವಿನೊಳಗೆ ಸಾಲದ ಅಸಲನ್ನು ಫಲಾನುಭವಿಗಳು ಮಂಡಳಿಗೆ ಹಿಂದಿರುಗಿಸಬೇಕಾಗುತ್ತದೆ. ಈ ಬಗ್ಗೆ ಸ್ಪಷ್ಟ ನಿಯಮಾವಳಿ ರೂಪಿಸುವಂತೆ ಅಧಿಕಾರಿಗಳಿಗೆ ಸಚಿವ ಸಂತೋಷ್ ಲಾಡ್ ಸೂಚಿಸಿದ್ದಾರೆ.
ಇದಕ್ಕೆ ಪೂರಕವಾಗಿ ಫಲಾನುಭವಿಗಳಿಗೆ ಸಾಲ ನೀಡಲು ಬ್ಯಾಂಕ್‌ಗಳೂ ಒಪ್ಪಿದ್ದು, ಪ್ರಾಯೋಗಿಕವಾಗಿ ಧಾರವಾಡ ಹಾಗೂ ಬಳ್ಳಾರಿಯಲ್ಲಿ ಅನು ಷ್ಠಾನಕ್ಕೆ ತರಲಾಗುವುದು ಎಂದಿದ್ದಾರೆ .