ಉಡುಪಿ :ಆಗಸ್ಟ್ 07 :ಏಷ್ಯಾದ ಅತಿ ದೊಡ್ಡ ಸರ್ವೃಋತು ಮೀನುಗಾರಿಕಾ ಬಂದರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಲ್ಪೆಯಲ್ಲಿ ಸಾಮಾಜಿಕ ಕಾರ್ಯಕರ್ತರು ಮೀನುಗಾರರ ನೆರವಿನೊಂದಿಗೆ ವಿಶಿಷ್ಟ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ.
ಮಳೆಗಾಲದಲ್ಲಿ ಅಪಾರ ಪ್ರಮಾಣದ ಕಸ ಸಮುದ್ರ ಸೇರುತ್ತದೆ. ಹೀಗೆ ಸಂಗ್ರಹವಾದ ಕಸ ಹಿನ್ನಿರಿನ ಮೂಲಕ ಮಲ್ಪೆ ಬಂದರು ಪ್ರದೇಶದಲ್ಲಿ ರಾಶಿ ಬಿದ್ದಿತ್ತು. ಇದೀಗ ಮೀನುಗಾರಿಕಾ ಚಟುವಟಿಕೆಗಳು ಆರಂಭವಾಗಿದೆ. ದಿನನಿತ್ಯ ಲಕ್ಷಾಂತರ ಜನ ಬಂದರು ಪ್ರದೇಶದಲ್ಲಿ ವಿವಿಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ. ಹಾಗಾಗಿ ಲೋಡುಗಟ್ಟಲೆ ಕಸಗಳನ್ನು ತೆರವು ಮಾಡುವ ಕಾರ್ಯಕ್ಕೆ ಸಾಮಾಜಿಕ ಕಾರ್ಯಕರ್ತರು ಮೀನುಗಾರರ ನೆರವಿನೊಂದಿಗೆ ಮುಂದಾಗಿದ್ದಾರೆ.
ಬಲೆಗಳನ್ನು ಬಳಸಿ ಕಸದ ರಾಶಿಯನ್ನು ಬಂದರು ಪ್ರದೇಶದ ಕೊಳಕು ನೀರಿನಿಂದ ಮೇಲಕ್ಕೆತ್ತಿದ್ದಾರೆ. ಅಪಾರ ಪ್ರಮಾಣದ ತ್ಯಾಜ್ಯ ಸಮುದ್ರ ಸೇರುತ್ತಿರುವುದರಿಂದ, ಅತ್ಯಂತ ಕಾಳಜಿ ವಹಿಸಿ ಈ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಗಿತ್ತು.
ಮುಂದಿನ ದಿನಗಳಲ್ಲಿ ಮೀನುಗಾರರು ಪ್ಲಾಸ್ಟಿಕ್ ತ್ಯಾಜ್ಯ ನೀರು ಸೇರಿದಂತೆ ಎಚ್ಚರಿಕೆವಹಿಸಬೇಕೆಂದು ಮೀನುಗಾರಿಕಾ ಇಲಾಖೆ ಸೂಚನೆ ನೀಡಿದೆ. ಈ ಸ್ವಚ್ಛತಾ ಅಭಿಯಾನಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.