ಪಡುಬಿದ್ರಿ: ಆಗಸ್ಟ್ 07:ಹೆಜಮಾಡಿ ಹಳೇ ಎಂಬಿಸಿ ರಸ್ತೆ ಟೋಲ್ ಪ್ಲಾಝಾದಲ್ಲಿ ಹೆದ್ದಾರಿ ಟೋಲ್ ಪಾವತಿಸದೇ ತನ್ನ ಕಾರನ್ನು ನುಗ್ಗಿಸಿದ್ದರೂ ಕಾರನ್ನು ತಡೆದ ಟೋಲ್ ಸಿಬ್ಬಂದಿ ಮೇಲೆ ಯದ್ವಾತದ್ವಾ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿ ಪರಾರಿಯಾದ ಕಾರು ಮಾಲಕನ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಆ. 6ರಂದು ಪ್ರಕರಣ ದಾಖಲಾಗಿದೆ.
ಬಂಟ್ವಾಳ ಮೂಲದ ಸಲೀಂ ಸುಂಕ ಪಾವತಿಸದೇ ತನ್ನ ಕೆಂಪು ಬಣ್ಣದ ಕಾರನ್ನು ಟೋಲ್ ಗೇಟಲ್ಲಿ ಬೆಳಿಗ್ಗಿನ 9-20ರ ಸುಮಾರಿಗೆ ನುಗ್ಗಿಸಿದ್ದ ಎನ್ನಲಾಗಿದೆ . ಅದನ್ನು ತಡೆದು ನಿಲ್ಲಿಸಿದ್ದ ಟೋಲ್ ಸಿಬ್ಬಂದಿ ಮೇಲೆ ಕಾರನ್ನು ಅಪಾಯಕಾರಿಯಾಗಿ ಚಲಾಯಿಸಿ ಮುಂದಕ್ಕೊಯ್ದು ನಿಲ್ಲಿಸಿ ಹಿಂದೆ ಮರಳಿ ಬಂದ ಆರೋಪಿಯು ಟೋಲ್ ಸಿಬಂದಿ ದೀಕ್ಷಿತ್ ಮೇಲೆ ಕೈಯಿಂದ ಹಾಗೂ ಕೊಡೆಯಿಂದ ಹಲ್ಲೆ ನಡೆಸಿ, ಬೆದರಿಸಿದ ವೀಡಿಯೋ ಜಾಲತಾಣಗಳಲ್ಲೂ ವೈರಲ್ ಆಗಿದೆ.
ಈ ಕುರಿತಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಈ ಕುರಿತಾದ ದೂರು ದಾಖಲಿಸಿಕೊಂಡ ಪೊಲೀಸರು ತಕ್ಷಣ ಆರೋಪಿಯ ಜಾಡು ಹಿಡಿದು ಉಡುಪಿಯತ್ತ ಧಾವಿಸಿ ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.