ವಿಶಾಖಪಟ್ಟಣಂ: ಆಗಸ್ಟ್ 04:ವಿಶಾಖಪಟ್ಟಣಂನಲ್ಲಿ ಭಾನುವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೂರು ಬೋಗಿಗಳು ಬೆಂಕಿಗಾಹುತಿಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಎಕ್ಸ್‌ಪ್ರೆಸ್ ರೈಲಿನ ಮೂರು ಹವಾನಿಯಂತ್ರಿತ ಕೋಚ್ಗಳು ಸುಟ್ಟು ಭಸ್ಮವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊರ್ಬಾ-ವಿಶಾಖಪಟ್ಟಣಂ ಎಕ್ಸ್ಪ್ರೆಸ್ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಅದು ನಿಂತಿದ್ದ ರೈಲಾಗಿದ್ದರಿಂದ ಬೆಂಕಿ ಹೊತ್ತಿಕೊಳ್ಳುವ ವೇಳೆಗೆ ಪ್ರಯಾಣಿಕರೆಲ್ಲಾ ಇಳಿದಿದ್ದರು ಎನ್ನಲಾಗಿದೆ
ರೈಲು ಬೆಳಗ್ಗೆ ಛತ್ತೀಸ್‌ಗಢದ ಕೊರ್ಬಾದಿಂದ ಪ್ಲಾಟ್‌ಫಾರ್ಮ್ ನಂಬರ್ ನಾಲ್ಕಕ್ಕೆ ಬಂದಿತ್ತು ಮತ್ತು ನಂತರ ತಿರುಪತಿಗೆ ಹೊರಡಬೇಕಿತ್ತು. ಕೊರ್ಬಾ ಎಕ್ಸ್‌ಪ್ರೆಸ್ ಬೆಳಿಗ್ಗೆ 6.30 ಕ್ಕೆ ಬಂದಿತು ಮತ್ತು ಕೋಚಿಂಗ್ ಡಿಪೋಗೆ ನಿರ್ವಹಣೆಗಾಗಿ ಹೋಗಬೇಕಾಗಿತ್ತು ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರೈಲಿಗೆ ಬೀಗ ಹಾಕಲಾಗಿದ್ದು, ವಿದ್ಯುತ್ ಸ್ಥಗಿತಗೊಳಿಸಲಾಗಿದೆ ಎಂದರು.
ಬೆಳಗ್ಗೆ 9.20ರ ವೇಳೆಗೆ ಬೋಗಿಗಳಲ್ಲಿ ಹೊಗೆ ಕಾಣಿಸಿಕೊಂಡಿತ್ತು, ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿತ್ತು. ಬಿ7 ಬೋಗಿ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಬಿ6 ಹಾಗೂ ಎಂ1 ಬೋಗಿಗಳು ಭಾಗಶಃ ಹಾನಿಗೊಳಗಾಗಿವೆ. ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದವು.