ಕಾಪು:ಆಗಸ್ಟ್ 04 :ವ್ಯಕ್ತಿಯೋರ್ವರಿಗೆ ಸೇರಿದ ಫ್ಲ್ಯಾಟ್ ಅನ್ನು ಬಾಡಿಗೆ ಪಡೆಯುವುದಾಗಿ ನಂಬಿಸಿ ಅಪರಿಚಿತ ವ್ಯಕ್ತಿಯೊಬ್ಬ ಬ್ಯಾಂಕ್ ಖಾತೆ ವಿವರ ಪಡೆದು 84,999 ರೂಪಾಯಿ ಹಣವನ್ನು ವರ್ಗಾವಣೆ ಮಾಡಿ ವಂಚಿಸಿದ ಘಟನೆ ಆ.2ರಂದು ಉದ್ಯಾವರದಲ್ಲಿ ನಡೆದಿದೆ
ನರೇಂದ್ರ ಬಾಬು ಎಂಬವರು ಫ್ಲ್ಯಾಟ್ ಅನ್ನು ಬಾಡಿಗೆ ಕೊಡುವ ಸಲುವಾಗಿ ವೆಬ್‌ಸೈಟ್‌ನಲ್ಲಿ ಜಾಹೀರಾತು ಹಾಕಿದ್ದರು. ಇದನ್ನು ನೋಡಿ ಆ.2ರಂದು ಬೆಳಗ್ಗೆ ಅವರ ಮೊಬೈಲ್‌ಗೆ ರಣದೀಪ್ ಸಿಂಗ್ ಎಂಬ ಅಪರಿಚಿತ ವ್ಯಕ್ತಿ ಕರೆ ಮಾಡಿ ತಾನು ಭಾರತೀಯ ಸೇನೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಕಾನ್ಪುರದಿಂದ ಉಡುಪಿಗೆ ವರ್ಗಾವಣೆಯಾಗಿರುತ್ತದೆ.
ತಮ್ಮ ಜಾಹೀರಾತಿನಲ್ಲಿ ತಿಳಿಸಿರುವ ಫ್ಲ್ಯಾಟ್ ಇಷ್ಟವಾಗಿದ್ದು, ಬ್ಯಾಂಕ್ ಖಾತೆ ವಿವರವನ್ನು ಅವರಿಗೆ ಕಳುಹಿಸಿದ್ದ. ಅಪರಿಚಿತ ವ್ಯಕ್ತಿಯು ಆರ್ಮಿಯ ನಿಯಮದಂತೆ ಅಕೌಂಟ್‌ನಲ್ಲಿ ಕನಿಷ್ಟ ಬ್ಯಾಲೆನ್ಸ್ ಒಂದು ಲಕ್ಷ ರೂ. ಇದ್ದಲ್ಲಿ ಮಾತ್ರ ನಿಮ್ಮ ಖಾತೆಗೆ ಹಣ ವರ್ಗಾಯಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದ್ದನು.
ಅದರಂತೆ ನರೇಂದ್ರ ಬಾಬು ಅವರು ಒಮ್ಮೆ 60 ಸಾವಿರ, ಮತ್ತೂಮ್ಮೆ 24,999 ರೂಪಾಯಿ ಹಣವನ್ನು ಖಾತೆಗೆ ವರ್ಗಾಯಿಸಿದ್ದರು. ಆ ಬಳಿಕ ಅಪರಿಚಿತ ವ್ಯಕ್ತಿ ಕರೆ ಮಾಡಿ ಒಂದು ಅಕೌಂಟ್ ನಂಬ್ರ ಹಾಗೂ ಐಎಫ್‌ಸಿ ನಂಬ್ರವನ್ನು ನೀಡಿದ್ದು ಆ ಖಾತೆಯಿಂದ ನರೇಂದ್ರ ಬಾಬು ಖಾತೆಗೆ ಹಣ ಹಾಕುವುದಾಗಿ ಗೂಗಲ್ ಪೇ ಓಪನ್ ಮಾಡುವಂತೆ ತಿಳಿಸಿದ್ದನು.
ಅದರಂತೆ ಗೂಗಲ್ ಪೇ ಓಪನ್ ಮಾಡಿದಾಗ ಬ್ಯಾಂಕ್ ಖಾತೆಯಲ್ಲಿದ್ದ 60 ಸಾವಿರ ರೂ. ಮತ್ತು 24,999 ರೂ. ಹಣವನ್ನು ವರ್ಗಾವಣೆ ಮಾಡಿದ್ದು ಅನಂತರ ಅಪರಿಚಿತ ವ್ಯಕ್ತಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸದೇ ವಂಚನೆ ಮಾಡಿದ್ದಾನೆ.
ಈ ಬಗ್ಗೆ ವಂಚನೆಗೊಳಗಾದ ನರೇಂದ್ರ ಬಾಬು ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ