ಬೆಂಗಳೂರು, ಆಗಸ್ಟ್ 3: ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮನೆ ಕಳೆದುಕೊಂಡು ಸಂತ್ರಸ್ತರಾದವರಿಗೆ ಪುನರ್ವಸತಿ ಕಲ್ಪಿಸುವ ವಿಚಾರದಲ್ಲಿ ಕರ್ನಾಟಕ ಸರ್ಕಾರ ಕೂಡ ಕೈಜೋಡಿಸಿದೆ. ಸಂತ್ರಸ್ತರಿಗೆ 100 ಮನೆಗಳನ್ನು ಕಟ್ಟಿಸಿಕೊಡಲಾಗುವುದು ಎಂದು ಕರ್ನಾಟಕ ಸಿಎಂ ಸಿದ್ದರಾಮಯ್ಯ ಶನಿವಾರ ಘೋಷಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಅವರು ಸಂದೇಶ ಪ್ರಕಟಿಸಿದ್ದಾರೆ.
ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತಕ್ಕೆ ಸಂಬಂಧಿಸಿ ಕರ್ನಾಟಕವು ಕೇರಳದೊಂದಿಗೆ ಒಗ್ಗಟ್ಟಿನಿಂದ ಇರಲಿದೆ. ನಾನು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ನಮ್ಮ ಬೆಂಬಲದ ಭರವಸೆ ನೀಡಿದ್ದೇನೆ. ಸಂತ್ರಸ್ತರಿಗೆ ಕರ್ನಾಟಕ 100 ಮನೆಗಳನ್ನು ನಿರ್ಮಿಸುವುದಾಗಿ ಘೋಷಿಸಿದ್ದೇನೆ. ಒಗ್ಗಟ್ಟಿನಿಂದ ನಾವು ಪುನರ್ರ್ನಿರ್ಮಾಣ ಮಾಡುತ್ತೇವೆ ಮತ್ತು ಭರವಸೆಯನ್ನು ಪುನಃಸ್ಥಾಪಿಸುತ್ತೇವೆ ಎಂದು ಎಕ್ಸ್ ಸಂದೇಶದಲ್ಲಿ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.
ಈ ಮಧ್ಯೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 100 ಮನೆಗಳ ಭರವಸೆ ನೀಡಿದ್ದಾರೆ. ಅವರಿಗೆ ನೇರವಾಗಿ ಕರೆ ಮಾಡಿ ಧನ್ಯವಾದ ಸಲ್ಲಿಸಿರುವುದಾಗಿ ಪಿಣರಾಯಿ ವಿಜಯನ್ ಕಚೇರಿ ತಿಳಿಸಿದೆ.