ಬೆಂಗಳೂರು : ಆಗಸ್ಟ್ 02:ಮುಡಾ ಹಗರಣ ಕುರಿತಂತೆ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹಾಗೂ ಜೆಡಿಎಸ್ ಶನಿವಾರದಿಂದ ಮೈಸೂರು ಚಲೋ ಪಾದಯಾತ್ರೆ ಹಮ್ಮಿಕೊಂಡಿವೆ. ಆದರೆ, ತಮಗೆ ಈ ಬಗ್ಗೆ ಮಾಹಿತಿ ಇಲ್ಲ. ಯಾರೂ ವಿನಂತಿ ಮಾಡಿಲ್ಲ. ನಗರದಲ್ಲಿ ಪ್ರತಿಭಟನೆಗೆ ಅವಕಾಶ ಇಲ್ಲ ಎಂದು ಬೆಂಗಳೂರು ನಗರ ಪೊಲಿಸ್ ಆಯುಕ್ತ ಬಿ. ದಯಾನಂದ್ ಸ್ಪಷ್ಟಪಡಿಸಿದ್ದಾರೆ .
ಪಾದಯಾತ್ರೆ ಎಲ್ಲಿಂದ, ಯಾವ ರೀತಿ ಶುರು ಮಾಡುತ್ತಾರೆ ಎಂಬುದು ಇನ್ನೂ ಗೊತ್ತಿಲ್ಲ. ನಗರದಲ್ಲಿ ಪ್ರತಿಭಟನೆಗೆ, ರ‍್ಯಾಲಿಗೆ, ಪಾದಯಾತ್ರೆಗೆ ಅನುಮತಿ ಇಲ್ಲ. ಹೈಕೋರ್ಟ್ ಆದೇಶದ ಅನ್ವಯ ಅನುಮತಿ ಇಲ್ಲ. ಆದರೂ ಪೂರಕವಾಗಿ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳುತ್ತೇವೆ. ನನ್ನ ಮಟ್ಟದಲ್ಲಿ ಯಾರೂ ಬಂದು ಇದುವರೆಗೆ ಅನುಮತಿ ಕೇಳಿಲ್ಲ ಎಂದು ಅವರು ಹೇಳಿದರು.
ಬಿಜೆಪಿ ಜೆಡಿಎಸ್ ಪಾದಯಾತ್ರೆಗೆ ನಾವು ಅನುಮತಿ ನೀಡುವುದಿಲ್ಲ. ಅವರು ಮಾಡುವುದಿದ್ದರೆ ಮಾಡಿಕೊಳ್ಳಲಿ, ಅದರ ಬಗ್ಗೆ ನಮ್ಮ ತಕರಾರಿಲ್ಲ. ಆದರೆ, ಅಧಿಕೃತವಾಗಿ ಪೊಲೀಸ್ ಇಲಾಖೆಯಿಂದ ನಾವು ಅನುಮತಿ ನೀಡುವುದಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ ಕೆಲವೇ ದಿನಗಳ ಹಿಂದೆ ಕಡ್ಡಿಮುರಿದಂತೆ ಹೇಳಿದ್ದರು. ಇದೀಗ ನಗರ ಪೊಲೀಸ್ ಆಯುಕ್ತರೂ ಅದೇ ರೀತಿ ಹೇಳಿಕೆ ನೀಡಿದ್ದಾರೆ.