ಕಾರ್ಕಳ : ಜುಲೈ 29:ರಾ.ಹೆ _169 ಸಾಣೂರು ಬಿಕರ್ನ ಕಟ್ಟೆ ರಾಷ್ಟ್ರೀಯ ಹೆದ್ದಾರಿ ಸಾಣೂರು ಪದವಿಪೂರ್ವ ಕಾಲೇಜಿಗೆ ಹೋಗುವ ರಸ್ತೆಯ ಪ್ರದೇಶದ ಎದುರುಗಡೆಯ ಗುಡ್ಡದ ಮಣ್ಣು ಕುಸಿತ ಆರಂಭವಾಗಿದ್ದು.. ಈಗಾಗಲೇ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಮಣ್ಣು ರಸ್ತೆಯ ಮೇಲೆ ಬಿದ್ದಿದೆ.
ರಾಷ್ಟ್ರೀಯ ಹೆದ್ದಾರಿ ರಸ್ತೆ ನಿರ್ಮಾಣ ಕಾಮಗಾರಿ ಸಂದರ್ಭದಲ್ಲಿ ಗುಡ್ಡವನ್ನು ಮೆಟ್ಟಿಲುಗಳ ಹಾಗೆ ಕಡಿದಿದ್ದರು.
ಇದೀಗ ಕಳೆದ 15 ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಗುಡ್ಡದ ಮಣ್ಣು ಜರಿದು ರಸ್ತೆಗೆ ಬೀಳುತ್ತಿದ್ದು ಪಕ್ಕದಲ್ಲಿರುವ ವಿದ್ಯುತ್ ಕಂಬ ಅಪಾಯಕಾರಿ ಸ್ಥಿತಿಯಲ್ಲಿದೆ.
ಸಾಣೂರು ಪದವಿಪೂರ್ವ ಕಾಲೇಜಿನ ಕಟ್ಟಡಕ್ಕೆ ತಾಗಿಕೊಂಡಿರುವ ಗುಡ್ಡದ ಅಂಚಿಗೆ ರಕ್ಷಣಾ ಗೋಡೆ ನಿರ್ಮಾಣದ ಸಂದರ್ಭದಲ್ಲಿ ಎದುರು ಭಾಗದ ಗುಡ್ಡಕ್ಕೂ ತಡೆಗೋಡೆ ಅವಶ್ಯಕತೆ ಇದೆ ಎಂದು ನಾಗರಿಕರು ಎಚ್ಚರಿಸಿದ್ದರೂ ಕಡೆಗಣಿಸಿದ ಹೆದ್ದಾರಿ ಇಲಾಖೆ ಇದೀಗ ಇನ್ನೊಂದು ದೊಡ್ಡ ಅಪಾಯಕ್ಕೆ ಆಹ್ವಾನ ಮಾಡಿದಂತಿದೆ.
ಮಾನ್ಯ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಹೆದ್ದಾರಿ ಕಾಮಗಾರಿ ಪರಿಶೀಲನೆಯ ಸಂದರ್ಭದಲ್ಲಿ ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಡಿಬಿಎಲ್ ಅಧಿಕಾರಿಗಳಿಗೆ ಗುಡ್ಡದ ಮಣ್ಣು ಜರಿದು ಬೀಳದಂತೆ ತಡೆಗೋಡೆ ನಿರ್ಮಾಣಕ್ಕೆ ನಿರ್ದೇಶನ ನೀಡಿದ್ದರೂ, ಗುಡ್ಡವನ್ನು ಮೆಟ್ಟಿಲು ರೀತಿಯಲ್ಲಿ ಕಡಿದಿರುವುದರಿಂದ ಯಾವುದೇ ಅಪಾಯ ಇಲ್ಲ ಎಂದು ತಿಳಿಸಿದ್ದರು.
ಒಂದು ವೇಳೆ ವಿದ್ಯುತ್ ಕಂಬ ಕುಸಿದು ಬಿದ್ದರೆವಿದ್ಯುತ್ ತಂತಿಗಳು ರಸ್ತೆಯ ಮೇಲೆ ಬಿದ್ದು ಸಂಚರಿಸುವ ವಾಹನಗಳಿಗೆ ಮತ್ತು ಪ್ರಯಾಣಿಕರಿಗೆ ವಿದ್ಯುತ್ ಆಘಾತ ಆಗುವ ಸಂಭವವಿದೆ.
ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಕಾರ್ಕಳ ಮೆಸ್ಕಾಂ ಈ ಬಗ್ಗೆ ಕೂಡಲೇ ಗಮನ ಹರಿಸಿ ಸಂಭಾವ್ಯ ಅಪಾಯದಿಂದ ಪರಿಸರದ ನಾಗರಿಕರನ್ನು ಮತ್ತು ಸಂಚರಿಸುವ ವಾಹನಗಳಿಗೆ ಯಾವುದೇ ಅಪಾಯವಾಗದ ರೀತಿಯಲ್ಲಿ ತುರ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ರವರು ಮಾಧ್ಯಮದ ಮೂಲಕ ಒತ್ತಾಯಿಸಿದ್ದಾರೆ.