ಉಡುಪಿ : ಜುಲೈ 29:ಮಣಿಪಾಲ- ಕೊಳಲಗಿರಿ ಮಾರ್ಗ ಮಧ್ಯೆ ಇರುವ ಮನೆಯೊಂದರ ಕಾಂಪೌಂಡ್ ಒಳಗೆ ಶುಕ್ರವಾರ ತಡರಾತ್ರಿ ಚಿರತೆ ಕಂಡುಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಶನಿವಾರ ಎರಡು ಕ್ಯಾಮರಾ ಅಳವಡಿಸಿದ್ದು, ಅದನ್ನು ರವಿವಾರ ಪರಿಶೀಲಿಸಿದಾಗ ಚಿರತೆಯ ಚಲನವಲನಗಳು ಪತ್ತೆಯಾಗಿಲ್ಲ.
ಇನ್ನೂ ಒಂದೆರಡು ದಿನ ಕ್ಯಾಮರಾ ಇಲ್ಲಿಯೇ ಇರಲಿದೆ. ಚಿರತೆ ಮತ್ತೆ ಆಗಮಿಸಿದರೆ ಬೋನು ಇರಿಸಲಾಗುವುದು ಎಂದು ಅರಣ್ಯ ಇಲಾಖೆ ಸಿಬಂದಿ ತಿಳಿಸಿದ್ದಾರೆ.
ಮನೆಯ ಕ್ಯಾಮರಾ ದಲ್ಲೂ ಶನಿವಾರ ಚಿರತೆ ಆಗಮಿಸಿದ ಕುರುಹು ಲಭ್ಯವಾಗಿಲ್ಲ ಎಂದು ಮನೆಯ ಮಾಲಕಿ ತಿಳಿಸಿದ್ದಾರೆ. ಚಿರತೆ ಕಂಡು ಬಂದ ಹಿನ್ನೆಲೆಯಲ್ಲಿ ಭೀತಿಗೊಂಡಿರುವ ಸ್ಥಳೀಯರು ಶನಿವಾರ ರಾತ್ರಿ 7ರೊಳಗೆ ಬಾಗಿಲು ಬಂದ್ ಮಾಡಿ ಒಳಗೆ ಸೇರಿದ್ದರು. ಕೆಲಸಕಾರ್ಯ ನಿಮಿತ್ತ ಹೊರಹೋದವರು ಎಂದಿನಂತೆ ಮನೆಗೆ ಹೋದರು.