ಕಾರ್ಕಳ : ಜುಲೈ 27: 1999 ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ತಮ್ಮನ್ನು ಸಮರ್ಪಿಸಿಕೊಂಡು ದೇಶದ ಗಡಿಯನ್ನು ರಕ್ಷಿಸಿ, ಜನರ ಪ್ರಾಣ ರಕ್ಷಣೆ ಮಾಡಿದ ಕಾರ್ಗಿಲ್ ಯೋಧರನ್ನು ಜೇಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ದೀಪ ನಮನ ಮತ್ತು ಪುಷ್ಪಾಂಜಲಿಯ ಮೂಲಕ ಸ್ಮರಿಸಿ ಗೌರವ ನಮನ ಸಲ್ಲಿಸಲಾಯಿತು. ಭಾರತ ಮಾತೆಗೆ ದೀಪವು ಜ್ವಲಿಸುವ ಮೂಲಕ ಈ ಕಾರ್ಯಕ್ರಮವನ್ನು ಭಾವನಾತ್ಮಕವಾಗಿ ಶಾಲಾ ಅಧ್ಯಕ್ಷರಾದ ಚಿತ್ತರಂಜನ್ ಶೆಟ್ಟಿಯವರು ಚಾಲನೆ ನೀಡಿದರೆ, ಜೇಸಿ ಸದಸ್ಯರು, ಶಿಕ್ಷಕಿಯರು, ವಿದ್ಯಾರ್ಥಿಗಳು ದೀಪ ಪ್ರಜ್ವಲನೆಯನ್ನು ಸಲ್ಲಿಸಿ ಹುತಾತ್ಮ ಯೋಧರನ್ನು ಸ್ಮರಿಸಿ ಬಾಷ್ಪಾಂಜಲಿ ಸಲ್ಲಿಸಿದರು.
ನಂತರ ಕಾರ್ಕಳ ಬಸ್ ನಿಲ್ದಾಣದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ದೀಪ ನಮನ ಪುಷ್ಪಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಾರ್ಕಳ ಪೊಲೀಸ್ ಠಾಣಾಧಿಕಾರಿ ಸುಬ್ರಹ್ಮಣ್ಯ ಇವರು ಇಂದು ನಾವೆಲ್ಲ ಕುಶಿಯಿಂದ ಜೀವಿಸಬೇಕಾದರೆ ಗಡಿ ಕಾಯುವ ಸೈನಿಕರು ಎಲ್ಲಾ ಕಷ್ಟಗಳನ್ನು ಸಹಿಸಿಕೊಂಡು ರಕ್ಷಣೆ ನೀಡಿರುವುದರಿಂದ ಮಾತ್ರ ಸಾಧ್ಯ. ಪಾಕಿಸ್ತಾನ ಕುತಂತ್ರದಿಂದ ಚಳಿಗಾಲದಲ್ಲಿ ಕಾರ್ಗಿಲ್ ಪ್ರದೇಶವನ್ನು ಆಕ್ರಮಿಸಿದಾಗ 15 ಸಾವಿರ ಅಡಿ ಎತ್ತರದಲ್ಲಿದ್ದ ಶತ್ರುಗಳನ್ನು ಕಡಿದಾದ ಬಂಡೆಗಳಿಂದ ಕೂಡಿದ ಕಷ್ಟ ಸಾಧ್ಯ ಪರ್ವತವನ್ನು ಗುಂಡುಗಳಿಗೆ ಎದೆಯೊಡ್ಡಿ ಏರಿ ಪಾಕಿಸ್ತಾನಿ ಸೈನಿಕರನ್ನು ಹಿಮ್ಮೆಟ್ಟಿಸಿದ್ದರಿಂದ ಮಾತ್ರ ಸಾಧ್ಯವಾಯಿತು. ಅನೇಕ ಯೋಧರು ಜೀವತೆತ್ತು ದೇಶ ರಕ್ಷಿಸಿದರು. ನಾವೆಲ್ಲ ಅವರನ್ನು ಸ್ಮರಿಸಿ ಗೌರವಿಸಬೇಕು. ನಮ್ಮ ದೇಶದ ನಾಡು, ನುಡಿಯ ರಕ್ಷಣೆಗಾಗಿ ನಾವೆಲ್ಲ ಭಾರತೀಯರಾಗಿ ದೇಶದ ಪರ ನಿಲ್ಲಬೇಕು ಎಂದು ಕರೆ ನೀಡಿದರು.
ಹುತಾತ್ಮ ಯೋಧರ ಸ್ಮರಣೆಗಾಗಿ ಗೀತ ಗಾಯನ ಮತ್ತು ಸ್ತಬ್ಧ ಚಿತ್ರ ಪ್ರದರ್ಶನ ನಡೆಯಿತು. ವಿದ್ಯಾರ್ಥಿಗಳು ಮೆರವಣಿಗೆ ಮೂಲಕ ಬಸ್ ನಿಲ್ದಾಣದಿಂದ ಶಾಲೆಯವರೆಗೆ ದೇಶಭಕ್ತಿ ಘೋಷಣೆಗಳೊಂದಿಗೆ ಸಾಗಿದರು.
ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ JC ಚಿತ್ತರಂಜನ್ ಶೆಟ್ಟಿಯವರು, JCI ಅಧ್ಯಕ್ಷರಾದ JC ಪ್ರಚೇತ್ ಕುಮಾರ್, ವಲಯ ಉಪಾಧ್ಯಕ್ಷರಾದ JC ವಿಘ್ನೇಶ್ ಪ್ರಸಾದ್, ಕಾರ್ಕಳ ಠಾಣಾಧಿಕಾರಿ ಸುಬ್ರಹ್ಮಣ್ಯ ಹೆಚ್, ಏಜೆಂಟರ ಬಳಗದ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ್, ರಿಕ್ಷಾ ಚಾಲಕ ಸಂಘದ ಅಧ್ಯಕ್ಷ ಪ್ರವೀಣ್ ಮಾಬಿಯಾನ್, ರೊಟರಿ ಕ್ಲಬ್ ಕಾರ್ಕಳದ ಉಪಾಧ್ಯಕ್ಷರಾದ ಬಾಲಕೃಷ್ಣ ದೇವಾಡಿಗ, ಟ್ಯಾಕ್ಸಿ ಏಜೆಂಟರ ಬಳಗದ ಅಧ್ಯಕ್ಷರಾದ ಲಿಯೋ ಫೆರ್ನಾಂಡಿಸ್, JFP ಸಮದ್ ಖಾನ್, JCI ಸದಸ್ಯರು, ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಸುರೇಖಾ ರಾಜ್ ರವರು ಉಪಸ್ಥಿತರಿದ್ದರು.