ಉಡುಪಿ, ಜುಲೈ 27:ಮಳೆಗಾಲದಲ್ಲಿ ಸಾಮಾನ್ಯವಾಗಿ ಪರಿಸರದ ಸುತ್ತ ಮುತ್ತ ಅಲ್ಲಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗಿ ಅವುಗಳ ಕಡಿತದಿಂದ ಡೆಂಗ್ಯೂನಂತಹ ಸಾಂಕ್ರಮಿಕ ರೋಗಗಳು ಹರಡುತ್ತವೆ. ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ಪಚ್ಛವಾಗಿರಿಸಿದ್ದಲ್ಲಿ ಮಾತ್ರ ಸೊಳ್ಳೆಗಳ ಹತೋಟಿಯಿಂದ ಡೆಂಗ್ಯೂ ಜ್ವರದ ನಿಯಂತ್ರಣ ಸುಲಭಸಾಧ್ಯ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಹೇಳಿದರು.
ಅವರು ಮಣಿಪಾಲ ಇಂಡಸ್ಟ್ರಿಯಲ್ ಏರಿಯಾದಲ್ಲಿ, ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಛೇರಿ, ನಗರ ಸಭೆ ಉಡುಪಿ, ನಗರ ಆರೋಗ್ಯ ಕೇಂದ್ರ ಮಣಿಪಾಲ ಹಾಗೂ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್, ಮಣಿಪಾಲ ಇನ್ ಸ್ಪೋಟ್ ಆಫ್ ಟೆಕ್ನಾಲಜಿ ಇವರ ಸಂಯುಕ್ತ ಆಶ್ರಯದಲ್ಲಿ ವಾರದ ಒಂದು ದಿನ ಪ್ರತೀ ಶುಕ್ರವಾರ ಈಡೀಸ್ ಸೊಳ್ಳೆ ಉತ್ಪತ್ತಿ ತಾಣಗಳ ನಾಶ’ ಮಾಡುವ ದಿನವಾಗಿ ಒಣಗಲು ದಿನ( Dry Day) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಡೆಂಗ್ಯೂ ಜ್ವರವು ವೈರಸ್ ನಿಂದ ಉಂಟಾಗುವ ಖಾಯಿಲೆಯಾಗಿದ್ದು, ಸೋಂಕು ಹೊಂದಿದ ಈಡೀಸ್ ಸೊಳ್ಳೆಗಳು ಕಚ್ಚುವುದರಿಂದ ರೋಗವು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಇದು ಹಗಲು ಹೊತ್ತಿನಲ್ಲಿ ಮಾತ್ರ ಕಚ್ಚುತ್ತದೆ. ಸಾರ್ವಜನಿಕರು ಜ್ವರ ಬಂದಲ್ಲಿ ಕೂಡಲೆ ಸ್ಥಳೀಯ ಆಸ್ಪತ್ರೆಗಳಿಗೆ ಭೇಟಿ ನೀಡಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದ ಅವರು, ಸೊಳ್ಳೆಗಳು ಸಂತಾನೋತ್ಪತ್ತಿ ನಡೆಸುವ ಸ್ಥಳಗಳಲ್ಲಿ ಲಾರ್ವಗಳನ್ನು ಪತ್ತೆ ಹಚ್ಚಿ, ಅವುಗಳನ್ನು ನಾಶಪಡಿಸುವ ಕೆಲಸವನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಮಾಡಬೇಕು ಎಂದರು.
ಉಷಾ ಫರ್ನಿಚರ್ ಇಂಡಸ್ಟ್ರೀ ಹಾಗೂ ಅಲ್ಪಾ ಟೆಕ್ ಆರ್.ಎಂ.ಸಿ ಶಂಕರ್ ರೂಫಿಂಗ್ ಸಿಸ್ಟಮ್ ಗೆ ಭೇಟಿ ನೀಡಿದಾಗ ಲಾರ್ವಾಗಳು ಕಂಡು ಬಂದಿದ್ದು, ಸ್ವಚ್ಛತೆಯನ್ನು ಕಾಪಾಡುವಂತೆ, ನೀರು ನಿಲ್ಲದಂತೆ ಎಚ್ಚರವಹಿಸಲು ಹಾಗೂ ಘನತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ಮಾಡುವಂತೆ ಸೂಚನೆ ನೀಡಿದರು.
ಲಾರ್ವಾ ಸಮೀಕ್ಷೆ ನಡೆಸಿ, ನೀರು ನಿಂತ ತಾಣಗಳಿಗೆ ಲಾರ್ವಾನಾಶಕ ಸಿಂಪಡಣೆ ಮಾಡಿಸಿದ್ದು, ಲಾರ್ವಾ ತಾಣಗಳ ನಿರ್ಮೂಲನೆ ಬಗ್ಗೆ ಆರೋಗ್ಯ ಶಿಕ್ಷಣ ನೀಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐಪಿ ಗಡಾದ, ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್ , ಪೌರಾಯುಕ್ತ ರಾಯಪ್ಪ, ಮಣಿಪಾಲ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನ ನಿರ್ದೇಶಕ ಚರಿಯನ್ , ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕ ನಾಗರಾಜ ನಾಯಕ, ಮಣಿಪಾಲ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಶಾಮಿನಿ ಕುಮಾರ್ ,ಕೀಟಶಾಸ್ತ್ರಜ್ಞೆ ಮುಕ್ತಾ, , ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.