ಕಾರ್ಕಳ :ಜುಲೈ 24:ಜ್ಞಾನದ ಅರಿವು, ಅದು ಜೀವನವನ್ನು ಬೆಳಗಬೇಕು. ಭಾರತೀಯ ಸಂಸ್ಕಾರ ಅದು ಬಾಳನ್ನು ಬೆಳಗುವ ಜ್ಞಾನ. ನಮ್ಮ ಪುರಾಣ, ಇತಿಹಾಸ, ವೇದಗಳು, ಮಹಾನ್ ಗ್ರಂಥಗಳು, ಇಡೀ ವಿಶ್ವಕ್ಕೆ ಜ್ಞಾನದ ಬೆಳಕನ್ನು ನೀಡಿದೆ. ಆದರೆ ಪಾಶ್ಚ್ಯಾತ್ಯರು ನಮ್ಮಿಂದ ಕಸಿದುಕೊಂಡ ಜ್ಞಾನವನ್ನು ನಮಗರಿವಿಲ್ಲದಂತೆ ತಮ್ಮದೆಂದು ಬಿಂಬಿಸುತ್ತಿದೆ. ನಮಗೆ ಪಾಶ್ಚ್ಯಾತ್ಯ ಅಂಧಾನು ಕರುಣೆಯ ಪಿಡುಗನ್ನು ನೀಡಿದೆ. ಆದರೆ ನಮ್ಮ ಧರ್ಮ, ಸಂಸ್ಕಾರಗಳನ್ನು ತಾವು ಅರಿತಾಗ ಮತ್ತೊಮ್ಮೆ ಇಡೀ ಜಗತ್ತಿಗೆ ಬೆಳಕನ್ನು ನೀಡಬಲ್ಲೆವು. ಈ ದಿಕ್ಕಿನಲ್ಲಿ ಜೇಸಿ ಆಂಗ್ಲ ಮಾಧ್ಯಮ ಶಾಲೆ ಎಲ್ಲರಿಗೂ ಮಾದರಿ. ಯಾವುದೇ ಸದ್ದಿಲ್ಲದೆ ವಿದ್ಯಾರ್ಥಿಗಳಿಗೆ ನೀಡುವ ಸಂಸ್ಕಾರ, ಸಂಸ್ಕೃತಿಯ ಪಾಠ ಎಲ್ಲರೂ ಮೆಚ್ಚುವಂತಹದ್ದು. ಆ ಮೂಲಕ ಈ ಶಾಲೆ ಭಾರತವನ್ನು ಜಗತ್ತಿನತ್ತ ತೆರೆಯುವ ವಿದ್ಯಾರ್ಥಿಗಳ ಸೃಷ್ಟಿ ಕಾರ್ಯ ಮಾಡುತ್ತಿದೆ ಎಂದು ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಜನರಲ್ ಮ್ಯಾನೇಜರ್ ಶ್ರೀಯುತ ದೇವಾನಂದ ಉಪಾಧ್ಯಾಯರು ಬಾಷ್ಪಾಂಜಲಿ ಭರಿತ ಕಣ್ಣುಗಳ ಮೂಲಕ ನುಡಿದರು. ಅವರು ಜೇಸಿ ಇಂಟರ್ ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುಪೂರ್ಣಿಮಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಈ ಮಾತುಗಳನ್ನು ನುಡಿದರು.
ಶಾಲಾ ಅಧ್ಯಕ್ಷರಾದ ಜೇಸಿ ಚಿತ್ತರಂಜನ್ ಶೆಟ್ಟಿ ಅವರು ಮಾತನಾಡುತ್ತಾ ಯಾವುದೇ ವ್ಯಕ್ತಿಗೆ ಗುರುವಿನ ಶಕ್ತಿ ಇಲ್ಲದಿದ್ದರೆ ಅವನು ಏನು ಮಾಡಿದರು ವ್ಯರ್ಥ. ನಾವು ಹೇಗೆ ಕಲಿಯುತ್ತೇವೆ ಎಂಬುದು ಮುಖ್ಯ. ನಮ್ಮ ಹಿರಿಯರು ಕೊಟ್ಟ ಶ್ರೇಷ್ಠ ವಿದ್ಯೆಗಳನ್ನು ಕಲಿಯಬೇಕು. ಧರ್ಮ ಎಂದರೆ ನ್ಯಾಯ. ಶಾಲೆಯಲ್ಲಿ ಸಂಸ್ಕಾರವನ್ನು ಕಲಿಸಬೇಕು. ಆಗ ಅವರು ವಿದೇಶ ವ್ಯಾಮೋಹವನ್ನು ಅಳವಡಿಸಿಕೊಳ್ಳುವುದಿಲ್ಲ ಎಂದು ಹೇಳಿದರು.
ಮಕ್ಕಳಿಂದ ಗುರುವಂದನಾ ಕಾರ್ಯಕ್ರಮ ಮತ್ತು ಮಾಜಿ ಶಿಕ್ಷಕಿ ಪೂನಂ ಕಾಮತ್ ರವರಿಗೆ ಸನ್ಮಾನ ಕಾರ್ಯಕ್ರಮಗಳು ನೆರವೇರಿದವು.
ಕಾರ್ಯಕ್ರಮದಲ್ಲಿ ಗಣಿತ ಶಿಕ್ಷಕ ಶ್ರೀ ಶಂಕರನ್ ರವರು, ಶಾಲಾ ನಾಯಕಿ ನಿರೀಕ್ಷಾ ಮತ್ತು ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುರೇಖಾ ರಾಜ್ ರವರು ಉಪಸ್ಥಿತರಿದ್ದರು.