ನವದೆಹಲಿ: ಜುಲೈ 24:ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 3.0 ಸರ್ಕಾರದ ಮೊದಲ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಉದ್ಯೋಗ, ಕೌಶಲ್ಯ, ಎಂಎಸ್‌ಎಂಇ ಮತ್ತು ಮಧ್ಯಮ ವರ್ಗದವರ ಮೇಲೆ ಬಜೆಟ್‌ನಲ್ಲಿ ಗಮನ ಹರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮುದ್ರಾ ಯೋಜನೆಯಡಿ ನೀಡಲಾಗುತ್ತಿರುವ ಸಾಲವನ್ನು ₹10 ಲಕ್ಷದಿಂದ ₹20 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಯಾವ ಎಂಎಸ್‌ಎಂಇ(ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು ) ಮಾಲೀಕರು ಸುಸ್ಥಿದಾರರಾಗದೆ ಸರಿಯಾದ ಸಮಯದಲ್ಲಿ ಸಾಲವನ್ನು ಮರುಪಾವತಿ ಮಾಡಿದ್ದಾರೋ ಅಂತವರಿಗೆ ಮಾತ್ರ ₹20 ಲಕ್ಷ ಸಾಲ ಪಡೆಯುವ ಅವಕಾಶವಿದೆ.
ಎಂಎಸ್‌ಎಂಇ ಉತ್ಪಾದನಾ ವಲಯಕ್ಕೆ ₹100 ಕೋಟಿ ಕ್ರೆಡಿಟ್ ಗ್ಯಾರಂಟಿ ಯೋಜನೆಯನ್ನು ನಿರ್ಮಲಾ ಘೋಷಿಸಿದ್ದಾರೆ. ಎಂಎಸ್‌ಎಂಗಳು ಯಾವುದೇ ಮೂರನೇ ವ್ಯಕ್ತಿಯ ಗ್ಯಾರಂಟಿ ನೀಡದೆ ಈ ಯೋಜನೆಯಡಿ ಸಾಲ ಪಡೆಯಬಹುದಾಗಿದೆ.
ಕಾರ್ಪೊರೇಟ್ ಅಲ್ಲದ, ಕೃಷಿಯೇತರ ಸಣ್ಣ ಮತ್ತು ಅತಿ ಸಣ್ಣ ಉದ್ಯಮಿಗಳಿಗೆ ಹಣಕಾಸು ನೆರವು ಒದಗಿಸುವ ನಿಟ್ಟಿನಲ್ಲಿ 2015ರ ಏಪ್ರಿಲ್ 8ರಂದು ಪ್ರಧಾನ ಮಂತ್ರಿ ಮುದ್ರಾ ಯೋಜನೆ(ಪಿಎಂಎಂವೈ) ಪ್ರಾರಂಭಿಸಲಾಯಿತು. ಜಾರಿಯಲ್ಲಿರುವ ಯೋಜನೆ ಅನ್ವಯ ಯಾವುದೇ ಆಧಾರವಿಲ್ಲದೆ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳನ್ನು ನಡೆಸಲು ಶಿಶು(₹50,000ವರೆಗೆ), ಕಿಶೋರ್(₹50 ಸಾವಿರದಿಂದ ₹5 ಲಕ್ಷದವರೆಗೆ) ಮತ್ತು ತರುಣ್(₹10) ಕೆಟಗರಿಗಳಲ್ಲಿ ₹10 ಲಕ್ಷದವರೆಗೆ ಬ್ಯಾಂಕ್‌ಗಳು ಸಾಲ ನೀಡಬಹುದಾಗಿದೆ.
ನಮ್ಮ ಸರ್ಕಾರವು ರೈತರು, ಯುವಕರು, ಮಹಿಳೆಯರು ಮತ್ತು ಬಡವರು ಸೇರಿ ಎಲ್ಲ ವರ್ಗಗಳನ್ನು ಒಳಗೊಂಡ ಅಭಿವೃದ್ಧಿಗೆ ಬದ್ಧವಾಗಿದೆ’ ಎಂದು ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದರು.