ಕಾಪು: ಜುಲೈ 24:ಹಲವು ವಿಫಲ ಪ್ರಯತ್ನಗಳ ಬಳಿಕ ಇದೀಗ ಮತ್ತೆ ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿಯ ಪಡುಬಿದ್ರಿಯ ಕಂಚಿನಡ್ಕ ಬಳಿ ಟೋಲ್ ಸಂಗ್ರಹಕ್ಕೆ ಆದೇಶ ನೀಡಿದ ಬಗ್ಗೆ ತಿಳಿದುಬಂದಿದ್ದು, ಜನವಿರೋಧಿ ಅದೇಶವನ್ನು 10 ದಿನದೊಳಗೆ ರದ್ದುಪಡಿಸದಿದ್ದರೆ ವಿವಿಧ ಸಂಘಟನೆಗಳ ಜತೆಗೂಡಿ ಉಗ್ರ ಹೋರಾಟ ನಡೆಸುವುದಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್ ಎಚ್ಚರಿಸಿದ್ದಾರೆ.
ಮಂಗಳವಾರ ಕಾಪು ಪ್ರೆಸ್ ಕ್ಲಬ್‌ನಲ್ಲಿ ಕ.ರ.ವೇ.(ಪ್ರವೀಣ್ ಶೆಟ್ಟಿ ಬಣ) ಉಡುಪಿ ಜಿಲ್ಲಾ ಘಟಕದ ವತಿಯಿಂದ ಕರೆದ ಸುದ್ದಿಗೋಷ್ಠಿಯಲ್ಲಿ ಅನ್ಸಾರ್ ಅಹಮದ್ ಮಾತನಾಡಿ ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿ 1ರಲ್ಲಿ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ವತಿಯಿಂದ ಈ ಹಿಂದೆ ಟೋಲ್ ಪ್ಲಾಝಾ ನಿರ್ಮಾಣಕ್ಕೆ ಹಲವು ಬಾರಿ ಪ್ರಯತ್ನ ನಡೆಸಿತ್ತು. ಆದರೆ ಸಾರ್ವಜನಿಕರು, ವಿವಿಧ ಸಂಘಟನೆಗಳ ನಿರ್ಣಾಯಕ ಹೋರಾಟದಿಂದ ಪ್ರಯತ್ನ ವಿಫಲವಾಗಿತ್ತು. ಈ ಬಾರಿ ಕೆಶಿಪ್ ವತಿಯಿಂದ ಕಂಚಿನಡ್ಕ ಬಳಿ ಅಗಸ್ಟ್ 16 ರಿಂದ ಟೋಲ್ ವಸೂಲಾತಿಗೆ ಆದೇಶ ಹೊರಡಿಸಿದೆ. ಹಾಸನದ ಖಾಸಗಿ ಕಂಪನಿಗೆ ಗುತ್ತಿಗೆಯನ್ನೂ ನೀಡಲಾಗಿದೆ. ಇಲ್ಲಿ ಟೋಲ್ ವಸೂಲಾತಿ ಅರಂಭವಾದರೆ ಮೂಲ್ಕಿ, ಮಂಗಳೂರು ಕಡೆಯಿಂದ ಕಾರ್ಕಳಕ್ಕೆ ಬರುವವರು ಕೇವಲ 5 ಕಿಮೀ ವ್ಯಾಪ್ತಿಯಲ್ಲಿ ಎರಡು ಬಾರಿ ಟೋಲ್ ನೀಡಬೇಕಾಗುತ್ತದೆ.
ಸರಕಾರಕ್ಕೆ ಕರಾವಳಿಯು ಪ್ರಯೋಗ ಶಾಲೆಯಾಗಿದೆ. ಬೇರೆ ಕಡೆ ಸಾಧಿಸಲಾಗದ್ದನ್ನು ಕರಾವಳಿಗೆ ತಂದು ಬಿಡುತ್ತಾರೆ. ಅದರೆ ಕರವೇ ಈ ಜನವಿರೋಧಿ ಆದೇಶವನ್ನು ಬಲವಾಗಿ ಖಂಡಿಸುತ್ತದೆ. ಕೆಶಿಪ್ ಈ ಆದೇಶವನ್ನು 10 ದಿನದೊಳಗೆ ರದ್ದುಪಡಿಸಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು. ಜಿಲ್ಲಾಧಿಕಾರಿ, ಜನಪ್ರತಿನಿಧಿಗಳ ಗಮನ ಸೆಳೆದು ಸಮಸ್ಯೆ ಪರಿಹಾರಕ್ಕೆ ವಿನಂತಿಸಲಾಗುವುದು ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕರವೇ ಉಡುಪಿ ಜಿಲ್ಲಾ ಸಂಚಾಲಕರಾದ ಸುಧೀರ್ ಪೂಜಾರಿ ಉಡುಪಿ, ಸಯ್ಯದ್ ನಿಜಾಮುದ್ದೀನ್ ಪಡುಬಿದ್ರಿ, ಶಾಫಿ ಪಡುಬಿದ್ರಿ, ಜ್ಯೋತಿ ಮೆನನ್, ಶಂಕರ ಕಂಚಿನಡ್ಕ ಮೊದಲಾದವರು ಉಪಸ್ಥಿತರಿದ್ದರು.