ಮಣಿಪಾಲ 23, ಜುಲೈ 2024 : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ] ನ ಕಸ್ತೂರ್ಬಾ ಮೆಡಿಕಲ್ ಹಾಸ್ಪಿಟಲ್ [ಕೆಎಂಸಿ] ಯಲ್ಲಿ ಕಾರ್ಯನಿರ್ವಹಿಸುವ ದ ಮಣಿಪಾಲ್ ಸೆಂಟರ್ ಫಾರ್ ಇಂಟರ್‌ಪ್ರೊಫೆಶನಲ್ ಅಡ್ವಾನ್ಸ್‌ಡ್ ಹೆಲ್ತ್ ಕೇರ್, ಸೆಂಟರ್ ಫಾರ್ ರೀ-ಸಸ್ಸಿಟೇಶನ್, ಅಕ್ಯೂಟ್ ಕೇರ್ ಮತ್ತು ಸೆಮಲ್ಟೇಶನ್ ಟ್ರೆನಿಂಗ್ [ಸಿಆರ್‌ಇಎಸ್‌ಟಿ], ಸೆಂಟರ್ ಫಾರ್ ಕ್ಲಿನಿಕಲ್ ಆ್ಯಂಡ್ ಇನ್ನೋವೇಟಿವ್ ಫೋರೆನ್ಸಿಕ್ಸ್-ಇವುಗಳ ಸಹಭಾಗಿತ್ವದಲ್ಲಿ ವಿವಿಧ ರೀತಿಯ ಆಘಾತ ಮತ್ತು ಗಾಯಗಳ ನಿರ್ವಹಣೆಯ ಕುರಿತ ಕಾರ್ಯಾಗಾರಗಳನ್ನು ಜುಲೈ 19, 2024 ರಂದು ಆಯೋಜಿಸಲಾಗಿದ್ದು, ವ್ರಣಗಳಿಗೆ ಪ್ರತಿಕ್ರಿಯಾತ್ಮಕವಾಗಿ ಕೈಗೊಳ್ಳುವ ಆರೈಕೆ ಕ್ರಮಗಳ ಬಗ್ಗೆ ಮತ್ತು ಗಾಯಗಳು ತೀವ್ರಗೊಂಡು ಪ್ರಾಣಾಪಾಯವಾಗುವುದನ್ನು ತಪ್ಪಿಸುವ ಬಗ್ಗೆ ಈ ಕಾರ್ಯಾಗಾರದಲ್ಲಿ ತರಬೇತಿಯನ್ನು ನೀಡಲಾಯಿತು. ತುರ್ತು ಸಂದರ್ಭದಲ್ಲಿ ತರಬೇತಿ ಹೊಂದಿದ ಪ್ರತಿಪ್ರೇಷಕ [ರೆಸ್ಪಾಂಡರ್] ರು ಆಘಾತಕ್ಕೊಳಗಾದವರ ಸ್ಥಿತಿಯನ್ನು ಸ್ಥಿರಗೊಳಿಸಿ, ಸಂಪನ್ಮೂಲಗಳನ್ನು ಬಳಸಿ, ಅವರನ್ನು ಹೇಗೆ ಬದುಕುಳಿಯುವಂತೆ ಮಾಡಬಹುದು ಎಂಬ ವಿಚಾರದ ಬಗ್ಗೆ ಕಾರ್ಯಾಗಾರದ ಆಶಯ ಕೇಂದ್ರೀಕೃತವಾಗಿತ್ತು.
ಉಡುಪಿಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಪರಮೇಶ್ವರ ಎ. ಹೆಗ್ಡೆ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತ, ‘ಆಘಾತಕ್ಕೊಳಗಾಗುವವರ ಗಾಯವನ್ನು ಆರೈಕೆ ಮಾಡುವ ಪ್ರಥಮ ಪ್ರತಿಪ್ರೇಷಕ [ಫರ್ಸ್ಟ್ ರೆಸ್ಪಾಂಡರ್] ರ ಕೌಶಲವನ್ನು ಹೆಚ್ಚಿಸುವುದು ಇಂದಿನ ಅಗತ್ಯವಾಗಿದೆ. ಆಘಾತಗಳನ್ನು ಪ್ರಾಯೋಗಿಕವಾಗಿ ನಿರ್ವಹಿಸಿ ಮಾನವೀಯವಾಗಿ ಸ್ಪಂದಿಸುವ ನೆಲೆಯಲ್ಲಿ ಉಡುಪಿಗೆ ಅತ್ಯುನ್ನತ ಸ್ಥಾನ ದೊರಕಿಸಿಕೊಡಬೇಕಿದೆ. ಈ ನಿಟ್ಟಿನಲ್ಲಿ ತರಬೇತಿ ಕಾರ್ಯಾಗಾರಗಳ ಪಾತ್ರ ಮಹತ್ತ್ವದ್ದಾಗಿದೆ’ ಎಂದರು.
ಕೆಎಂಸಿಯ ತುರ್ತು ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕರಾದ ಡಾ. ವಿಮಲ್ ಕೃಷ್ಣನ್, ನುರಿತ ದಾದಿಯಾಗಿ ಸಕ್ರಿಯವಾಗಿರುವ ಪ್ರಸನ್ನ ಕುಮಾರ, ಫೋರೆನ್ಸಿಕ್ ಸಾಯನ್ಸಸ್ ಪ್ರೊಫೆಸರ್ ಡಾ. ವಿನೋದ್ ನಾಯಕ್, ಪ್ಲಾಸ್ಟಿಕ್ ಸರ್ಜರಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ತನ್ವಿ ರಾವ್, ಮಾಹೆಯ ಫೈಮೆರ್ ಇಂಟರ್‌ನೇಶನಲ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕರಾದ ಮತ್ತು ಮಣಿಪಾಲ್ ಸೆಂಟರ್ ಫಾರ್ ಎಕ್ಸಲೆನ್ಸ್ ಇನ್ ಇಂಟರ್‌ಪ್ರೊಫೆಶನಲ್ ಎಡ್ವಾನ್ಸ್‌ಡ್ ವೂಂಡ್ ಕೇರ್‌ನ ಸಂಚಾಲಕರಾದ ಡಾ. ಎಲ್ಸಾ ಸನಾತೊಂಬಿ ದೇವಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಅವರು ವಿವಿಧ ಆಘಾತಗಳ ನಿರ್ವಹಣೆಯಲ್ಲಿ ಪ್ರಥಮ ಪ್ರತಿಪ್ರೇಷಕ [ಫರ್ಸ್ಟ್ ರೆಸ್ಪಾಂಡರ್] ನ ಪಾತ್ರದ ಕುರಿತು ವಿವರಿಸಿದರು.
ಪಿಎಚ್‌ಡಿ ವಿದ್ಯಾರ್ಥಿಗಳಾದ ಶ್ರೀನಿಧಿ ಜೋಗಿ ಮತ್ತು ಇಫೆನ್ಸಿಯಾ ಡಿ. ವಾಹ್‌ಲ್ಯಾಂಗ್ ಅವರು ಕಾರ್ಯಾಗಾರದ ಸಂಯೋಜಕರಾಗಿ ಸಹಕರಿಸಿ, ಕಾರ್ಯಾಗಾರದಲ್ಲಿ ಭಾಗಿಯಾದವರ ಪ್ರಾಯೋಗಿಕ ಅನುಭವ ಮತ್ತು ಪ್ರತಿಪ್ರೇಷಕ ಸಾಮರ್ಥ್ಯ ಅಧಿಕವಾಗುವಂಥ ಅಭ್ಯಾಸಗಳನ್ನು ನಡೆಸಿಕೊಟ್ಟರು.
ಮಣಿಪಾಲ್ ಕಾಲೇಜ್ ಆಪ್ ನರ್ಸಿಂಗ್‌ನ ಸಹ-ಡೀನ್ ಆಗಿರುವ ಡಾ. ಟ್ರೆಸ್ಸಿ ಟ್ರೀಸಾ ಜೋಸ್, ಐವೂಂಡ್ ಗ್ಲೋಬಲ್‌ನ ನಿರ್ದೇಶಕ ಪ್ರೊ ಸೆಲ್ವಮ್ ವಾಟ್ಸ್ ಅವರು ಕಾರ್ಯಾಗಾರದ ಮಹತ್ತ್ವವನ್ನು ವಿವಿರಿಸಿ, ಆಯೋಜಕರನ್ನು ಅಭಿನಂದಿಸಿದರು.
ಮಣಿಪಾಲ ಮತ್ತು ಮಂಗಳೂರು ಕೆಎಂಸಿಯ ವಿವಿಧ ವಿಭಾಗಗಳ ಸಿಬಂದಿಗಳು. ದಾದಿಯರು, ಪೊಲೀಸ್ ಇಲಾಖೆಯ ಸಿಬಂದಿಗಳು ಈ ಕಾರ್ಯಾಗಾರದಲ್ಲಿ ಸಕ್ರಿಯವಾಗಿ ಭಾಗವಹಿಸಿದರು