ಕೊಲ್ಲೂರು:ಜುಲೈ 23: ಶಿವಮೊಗ್ಗದಿಂದ ಕುಂದಾಪುರಕ್ಕೆ ಬರುತ್ತಿದ್ದ ಖಾಸಗಿ ಬಸ್ ಕೊಲ್ಲೂರು ಸಮೀಪದ ದಳಿ ಬಳಿಯ ಘಾಟಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದು ಹಾನಿಗೀಡಾದ ಘಟನೆ ಜು. 22ರಂದು ಸಂಭವಿಸಿದೆ.
ಕೊಲ್ಲೂರು ಶ್ರೀ ಮೂಕಾಂಬಿಕಾ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನ 10 ವಿದ್ಯಾರ್ಥಿಗಳ ಸಹಿತ 17 ಪ್ರಯಾಣಿಕರು ಗಾಯಗೊಂಡಿದ್ದಾರೆ
ಬಸ್ ಮರಕ್ಕೆ ಢಿಕ್ಕಿ ಹೊಡೆದು ನಿಂತ ಕಾರಣ ಸಂಭಾವ್ಯ ದುರಂತ ತಪ್ಪಿದೆ. ಕಳೆದ ಒಂದು ವಾರದಿಂದ ಮಳೆಯ ಹಿನ್ನೆಲೆಯಲ್ಲಿ ರಜೆ ಇದ್ದ ಕಾರಣ ಹಾಸ್ಟೆಲ್‌ನಲ್ಲಿದ್ದ ಸಾಗರ, ನಗರ, ಹೊಸನಗರ, ನಿಟ್ಟೂರು, ಶಿವಮೊಗ್ಗ ಪರಿಸರದ ವಿದ್ಯಾರ್ಥಿಗಳು ಮನೆಗೆ ತೆರಳಿದ್ದವರು ಸೋಮವಾರ ಈ ಬಸ್ಸಲ್ಲಿ ಮರಳಿ ಬರುತ್ತಿದ್ದರು.
ಹೊಸನಗರ ಮೂಲದ ಸಹನಾ ಡಿ.ಎಸ್., ಹೊಸಕೊಪ್ಪದ ಸಾಕ್ಷಿ ಹಾಗೂ ಶೀಯಾ, ಆಡಗಲ್‌ನ ಭವಾನಿ, ನವೀನ, ಚೇತನ ನೆಲ್ಲಿ ಬೀಡು, ಸತ್ಯನಾರಾಯಣ ನಿಟ್ಟೂರು, ಮಣಿಕಂಠ ಕಟ್ಟಿನಕರ, ಪೂರ್ಣಿಮಾ ಹೊನ್ನಾಳಿ, ಸಿಂಧೂ ಸುಳ್ಳಳ್ಳಿ, ಪ್ರೀತಮ್ ಸಂತೆಕಟ್ಟೆ, ಹೇಮಂತ್, ರಾಕೇಶ, ಸೂರ್ಯ ಕುಂದಾಪುರ ಸರಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.
ಉಡುಪಿ ಜಿಲ್ಲಾ ಹೆಚ್ಚುವರಿ ಎಸ್.ಪಿ. ಸಿದ್ಧಲಿಂಗಪ್ಪ, ಕೊಲ್ಲೂರು ಠಾಣೆಯ ಪಿಎಸ್‌ಐಗಳಾದ ವಿನಯ ಕೊರ್ಲಹಳ್ಳಿ, ಸುಧಾರಾಣಿ ಹಾಗೂ ಸಿಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬೈಂದೂರು ಬಿಇಒ ನಾಗೇಶ ನಾಯಕ್, ಹೆಚ್ಚುವರಿ ಎಸ್‌ಪಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿ ದರು. ಕೊಲ್ಲೂರು ಹಾಗೂ ದಳಿ ನಿಟ್ಟೂರು ಪರಿಸರದ ಗ್ರಾಮಸ್ಥರು ಗಾಯಾಳುಗಳನ್ನು ಆಸ್ಪತ್ರೆಗೆ ಒಯ್ಯಲು ಸಹಕರಿಸಿದರು. ಶಾಲೆ, ಕಾಲೇಜಿನ ಮುಖ್ಯ ಶಿಕ್ಷಕರು, ಶಿಕ್ಷಕರು ಸುದ್ದಿ ತಿಳಿದೊಡನೆ ಸ್ಥಳಕ್ಕೆ ಧಾವಿಸಿ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು.