ನವದೆಹಲಿ: ಜುಲೈ 22:ಲೋಕಸಭಾ ಅಧಿವೇಶನದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಂಕಿ ಅಂಶಗಳೊಂದಿಗೆ ಆರ್ಥಿಕ ಸಮೀಕ್ಷೆ ವರದಿ 2023–24 ಅನ್ನು ಮಂಡಿಸಿದರು.
ಆರ್ಥಿಕ ಸಮೀಕ್ಷೆಯು ದೇಶದ ಆರ್ಥಿಕತೆಯ ಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಬಜೆಟ್‌ಗೆ ಮುಂಚಿತವಾಗಿ ಸರ್ಕಾರವು ಪ್ರಸ್ತುತಪಡಿಸುವ ವಾರ್ಷಿಕ ದಾಖಲೆಯಾಗಿದೆ.
ದೇಶದ ಆರ್ಥಿಕತೆಯ ಅಲ್ಪಾವಧಿ ಮತ್ತು ಮಧ್ಯಮ ಅವಧಿಯ ನಿರೀಕ್ಷೆಗಳ ಅವಲೋಕನವನ್ನು ಸಹ ಇದು ಒದಗಿಸುತ್ತದೆ.
ಮುಖ್ಯ ಆರ್ಥಿಕ ಸಲಹೆಗಾರರ ಮೇಲ್ವಿಚಾರಣೆಯಲ್ಲಿ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಆರ್ಥಿಕ ವಿಭಾಗದಿಂದ ಈ ವರದಿಯನ್ನು ಸಿದ್ಧಪಡಿಸಲಾಗುತ್ತದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆಯಲ್ಲಿ 2024-25ರಲ್ಲಿ ಭಾರತದ ಜಿಡಿಪಿ ಬೆಳವಣಿಗೆಯ ದರವನ್ನು ಶೇಕಡಾ 6.5ರಿಂದ 7ಕ್ಕೆ ಅಂದಾಜಿಸಲಾಗಿದೆ. ಏಪ್ರಿಲ್ನ ವರ್ಲ್ಡ್ ಎಕನಾಮಿಕ್ ಔಟ್ ಲುಕ್ ಪ್ರಕಾರ 2023ರಲ್ಲಿ ಜಾಗತಿಕ ಆರ್ಥಿಕ ಬೆಳವಣಿಗೆಯು ಶೇಕಡಾ 3.2 ರಷ್ಟಿರುತ್ತದೆ ಎಂದು ಸಮೀಕ್ಷೆಯಲ್ಲಿ ಪ್ರಸ್ತಾಪಿಸಲಾಗಿದೆ.
ದೇಶಗಳ ನಡುವೆ ವಿಭಿನ್ನ ಬೆಳವಣಿಗೆಯ ಮಾದರಿಗಳು ಹೊರಹೊಮ್ಮಿವೆ. ದೇಶೀಯ ರಚನಾತ್ಮಕ ಸಮಸ್ಯೆಗಳು, ಭೌಗೋಳಿಕ ರಾಜಕೀಯ ಸಂಘರ್ಷಗಳ ವಿಭಿನ್ನ ಪರಿಣಾಮ ಮತ್ತು ವಿತ್ತೀಯ ನೀತಿಗಳ ಬಿಗಿಗೊಳಿಸುವಿಕೆಯ ಪರಿಣಾಮದಿಂದಾಗಿ ದೇಶಗಳ ಬೆಳವಣಿಗೆಯ ದರದಲ್ಲಿ ತೀವ್ರ ವ್ಯತ್ಯಾಸವಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಬಾಹ್ಯ ಸವಾಲುಗಳ ಪರಿಣಾಮ ಕಡಿಮೆ: ಬಾಹ್ಯ ಸವಾಲುಗಳ ಹೊರತಾಗಿಯೂ ಭಾರತದ ಆರ್ಥಿಕತೆಯು ಹಣಕಾಸು ವರ್ಷ 2023ರಲ್ಲಿ ಸಾಧಿಸಿದ ಆವೇಗವನ್ನು 2024ರ ಹಣಕಾಸು ವರ್ಷದವರೆಗೆ ಕಾಪಾಡಿಕೊಂಡಿದೆ. ಭಾರತದ ನೈಜ ಜಿಡಿಪಿ 2024ರ ಹಣಕಾಸು ವರ್ಷದಲ್ಲಿ ಶೇಕಡಾ 8.2ರಷ್ಟು ಬೆಳೆದಿದೆ. ಇದು ಹಣಕಾಸು ವರ್ಷ 2024ರ ನಾಲ್ಕು ತ್ರೈಮಾಸಿಕಗಳ ಪೈಕಿ ಮೂರು ತ್ರೈಮಾಸಿಕಗಳಲ್ಲಿ ಶೇಕಡಾ 8ರ ಗಡಿಯನ್ನು ಮೀರಿದೆ. ಸ್ಥೂಲ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುವತ್ತ ಗಮನ ಹರಿಸಿದ್ದರಿಂದ ಬಾಹ್ಯ ಸವಾಲುಗಳು ಭಾರತದ ಆರ್ಥಿಕತೆಯ ಮೇಲೆ ಕನಿಷ್ಠ ಪರಿಣಾಮ ಬೀರಲಿವೆ ಎಂದು ಸಮೀಕ್ಷೆ ತಿಳಿಸಿದೆ.
ಹಣದುಬ್ಬರ ಶೇ 5.4ಕ್ಕೆ ಇಳಿಕೆ: ಸೂಕ್ತ ಸಮಯದಲ್ಲಿ ಸರಿಯಾದ ನೀತಿಗಳನ್ನು ಜಾರಿಗೊಳಿಸಿದ್ದರಿಂದ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಬೆಲೆ ಸ್ಥಿರತೆ ಕ್ರಮಗಳು ಚಿಲ್ಲರೆ ಹಣದುಬ್ಬರವನ್ನು ಶೇಕಡಾ 5.4ಕ್ಕೆ ಇಳಿಸಲು ಸಹಾಯ ಮಾಡಿದೆ ಎಂದು ಆರ್ಥಿಕ ಸಮೀಕ್ಷೆ 2023-2024 ಸೋಮವಾರ ತಿಳಿಸಿದೆ. ಹಣಕಾಸು ವರ್ಷ 2022 ಮತ್ತು 2023ರ ಅವಧಿಯಲ್ಲಿ, ಕೋವಿಡ್ -19 ಸಾಂಕ್ರಾಮಿಕ, ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಪೂರೈಕೆ ಅಡೆತಡೆಗಳು ಜಾಗತಿಕವಾಗಿ ಹಣದುಬ್ಬರದ ಒತ್ತಡವನ್ನು ಹೆಚ್ಚಿಸಲು ಕಾರಣವಾಗಿವೆ ಎಂದು ಸಮೀಕ್ಷೆ ಹೇಳಿದೆ.