ಮಂಗಳೂರು: ಜುಲೈ 19:ಕರಾವಳಿ, ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಹಿನ್ನೆಲೆ ಮಂಗಳೂರು-ಉಡುಪಿ ಭಾಗಗಳಿಗೆ ಬೆಂಗಳೂರಿನಿಂದ ಸಂಪರ್ಕ ಕಡಿತಗೊಂಡಿದೆ. ಗುಡ್ಡ ಕುಸಿತದಿಂದ ಮಂಗಳೂರು-ಬೆಂಗಳೂರು ನಡುವೆ ರಸ್ತೆ ಸಂಪರ್ಕ ಕಡಿತ ಹಿನ್ನೆಲೆ ಹೆಚ್ಚುವರಿ ರೈಲು ಸೇವೆ ಒದಗಿಸುವಂತೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಬರೆದ ಪತ್ರಕ್ಕೆ ರೈಲ್ವೇ ಇಲಾಖೆ ಸ್ಪಂದನೆ ನೀಡಿದೆ. ಬೆಂಗಳೂರು-ಮಂಗಳೂರು ಮಧ್ಯೆ ಹೆಚ್ಚುವರಿ ರೈಲು ಓಡಿಸಲು ಆದೇಶಿಸಲಾಗಿದೆ.
ಶಿರಾಡಿ ಘಾಟ್ ಸಂಪೂರ್ಣ ಬಂದ್ ಆಗಿದ್ದು, ಮಡಿಕೇರಿ ಹೆದ್ದಾರಿ ರಾತ್ರಿ ವೇಳೆ ಬಂದ್ ಮಾಡಲಾಗಿದೆ. ಸದ್ಯ ಏಕೈಕ ತೆರೆದಿರುವ ಚಾರ್ಮಾಡಿ ಹೆದ್ದಾರಿಯಲ್ಲಿಯೂ ಭಾರೀ ಟ್ರಾಫಿಕ್ ಜಾಂ ಇದೆ. ಈ ಹಿನ್ನೆಲೆ, ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟರು ರೈಲ್ವೇ ಇಲಾಖೆಗೆ ಮಂಗಳೂರು-ಬೆಂಗಳೂರು ನಡುವೆ ಹೆಚ್ಚುವರಿ ರೈಲು ಸೇವೆ ಒದಗಿಸುವಂತೆ ಪತ್ರ ಬರೆದಿದ್ದಾರೆ. ನೈಋತ್ಯ ರೈಲ್ವೆ ಜನರಲ್ ಮ್ಯಾನೇಜರ್ ಮತ್ತು ಮೈಸೂರು ಡಿಆರ್‌ಎಮ್ ಅವರಿಗೆ ಕಳುಹಿಸಿದ ಈ ಪತ್ರದ ಮೇಲೆ ಸ್ಪಂದನೆ ಆಗಿದ್ದು, ಹೆಚ್ಚುವರಿ ರೈಲು ಸೇವೆಯನ್ನು ತುರ್ತಾಗಿ ಪ್ರಾರಂಭಿಸಲು ಆದೇಶಿಸಲಾಗಿದೆ.