ಮಂಗಳೂರು :ಜುಲೈ 19: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ] ನ ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜ್ [ಕೆಎಂಸಿ] ನ್ನು ಪ್ರತಿಸೂಕ್ಷ್ಮಜೀವಿಗಳ ನಿರೋಧದ ರಾಷ್ಟ್ರೀಯ ಕಾರ್ಯಾಚರಣೆಯ ಪ್ರಾದೇಶಿಕ ಕೇಂದ್ರ [ಸೆಂಟರ್ ಫಾರ್ ದ ನೇಶನಲ್ ಆ್ಯಕ್ಷನ್ ಪ್ಲ್ಯಾನ್ ಆ್ಯಂಟಿ ಮೈಕ್ರೋಬಿಯಲ್ ರೆಸಿಸ್ಟ್ಯಾನ್ಸ್] ವಾಗಿ ರಾಷ್ಟ್ರೀಯ ವೈದ್ಯಕೀಯ ಮಂಡಳಿ [ನೇಶನಲ್ ಮೆಡಿಕಲ್ ಕೌನ್ಸಿಲ್-ಎನ್‌ಎಂಸಿ] ಮಾನ್ಯ ಮಾಡಿದೆ.
ಭಾರತದಲ್ಲಿ ಮಣಿಪಾಲ ಸಮೂಹದ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಪ್ರತಿಸೂಕ್ಷ್ಮಾಣುಜೀವಿಗಳ ನಿರೋಧದ ಕುರಿತ ಹೋರಾಟ ಮತ್ತು ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಪ್ರಯತ್ನದ ಹಾದಿಯಲ್ಲಿ ಈ ಮಾನ್ಯತೆಯು ಪ್ರಮುಖ ಮೈಲಿಗಲ್ಲಾಗಿದೆ. ರಾಷ್ಟ್ರೀಯ ವೈದ್ಯಕೀಯ ಮಂಡಳಿ [ನೇಶನಲ್ ಮೆಡಿಕಲ್ ಕೌನ್ಸಿಲ್-ಎನ್‌ಎಂಸಿ] ಯು ಭಾರತದ ವೈದ್ಯಕೀಯ ಕಾಲೇಜು ಮತ್ತು ಸಂಸ್ಥೆಗಳಲ್ಲಿ ವೈದ್ಯರನ್ನು ತರಬೇತಿಗೊಳಿಸಲು ಸಂಪನ್ಮೂಲ ಪ್ರಾಧ್ಯಾಪಕರನ್ನು ಸಿದ್ಧಪಡಿಸುತ್ತಿದೆ. ಈ ಉಪಕ್ರಮದ ಭಾಗವಾಗಿ ಮಂಗಳೂರಿನ ಕೆಎಂಸಿಯನ್ನು ಅಧಿಕೃತ ಪ್ರಾದೇಶಿಕ ಕೇಂದ್ರಗಳ ಯಾದಿಯಲ್ಲಿ ಸೇರಿಸಿಕೊಳ್ಳಲಾಗಿದೆ. ಎಲ್ಲ ಪ್ರಾದೇಶಿಕ ಕೇಂದ್ರಗಳು ಕನಿಷ್ಠ ನಾಲ್ಕು ಮಂದಿ ಪ್ರಾಧ್ಯಾಪಕರಿರುವ ಎನ್‌ಎಪಿ-ಎಎಂಆರ್ ಕೇಂದ್ರವನ್ನು ಸ್ಥಾಪಿಸಬೇಕಾಗಿದ್ದು ಸೂಕ್ಷ್ಮಜೀವವಿಜ್ಞಾನ, ಔಷಧ ವಿಜ್ಞಾನ, ವೈದ್ಯಕೀಯ ಮತ್ತು ಸಮೂಹ ವಿಭಾಗಕ್ಕೆ ಸೇರಿದ ಪ್ರಾಧ್ಯಾಪಕ ನೋಡಲ್ ಅಧಿಕಾರಿಯಾಗಿರಬೇಕಾಗುತ್ತದೆ.
ಎನ್‌ಎಂಸಿಯು ಒಬ್ಬ ಪ್ರಾದೇಶಿಕ ಸಂಚಾಲಕರನ್ನು ನೇಮಕ ಮಾಡುತ್ತಿದ್ದು, ಮಂಗಳೂರಿನ ಕೆಎಂಸಿಯ ಸೂಕ್ಷ್ಮಜೀವವಿಜ್ಞಾನ ವಿಭಾಗದ ಸಹ-ಪ್ರಾಧ್ಯಾಪಕರಾದ ಡಾ. ಪೂಜಾ ರಾವ್ ಈ ಹುದ್ದೆಗೆ ಆಯ್ಕೆಯಾಗಿದ್ದಾರೆ. ಮಾಹೆಯ ಉಪಕುಲಪತಿಗಳಾದ ಲೆ. ಜ. ಡಾ. ಎಂ. ಡಿ. ವೆಂಕಟೇಶ್ ಅವರು ಅವರು ಎನ್‌ಎಪಿ-ಎಎಂಆರ್‌ನಿಂದ ಪ್ರಾದೇಶಿಕ ಕೇಂದ್ರವಾಗಿ ಮಾಹೆಗೆ ದೊರೆತ ಮಾನ್ಯತೆ ಮಾಹೆಯ ವೈದ್ಯಕೀಯ ಶಿಕ್ಷಣ ಮತ್ತು ಸಾಮಾಜಿಕ ಸ್ವಾಸ್ಥ್ಯದ ಕುರಿತ ಕಾಳಜಿಗೆ ದೊರೆತ ಮನ್ನಣೆಯಾಗಿದೆ. ರೋಗಕಾರಕ ಸೂಕ್ಷ್ಮಾಣುಜೀವಿಗಳ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಆವಶ್ಯಕ ಕೌಶಲದ ಜೊತೆಗೆ ಜಾಗತಿಕ ಮಟ್ಟದಲ್ಲಿ ಎದುರಿಸಬೇಕಾದ ಸವಾಲುಗಳ ಬಗ್ಗೆ ಅರಿವು ಇರುವ ವೃತ್ತಿಪರ ಆರೋಗ್ಯಪಾಲಕರನ್ನು ಸಿದ್ಧಪಡಿಸುವಲ್ಲಿ ಮಾಹೆ ಬದ್ಧವಾಗಿದೆ. ಜಾಗತಿಕ ಸ್ವಾಸ್ಥ್ಯಕ್ಕೆ ಸವಾಲಾಗಿರುವ ಪ್ರತಿಸೂಕ್ಷ್ಮಾಣುಜೀವಿ ನಿರೋಧವನ್ನು ಸಾಧಿಸುವ ಎನ್‌ಎಂಸಿಯ ಧ್ಯೇಯವನ್ನು ಮಾಹೆಯು ಸದಾ ಬೆಂಬಲಿಸುತ್ತದೆ’ ಎಂದರು. ಮಂಗಳೂರಿನ ಕೆಎಂಸಿಯ ಡೀನ್ ಡಾ. ಉನ್ನಿಕೃಷ್ಣನ್ ಅವರು, ‘ಸಮಾಜವನ್ನು ಆರೋಗ್ಯಪೂರ್ಣವಾಗಿಸುವ ಎನ್‌ಎಂಸಿಯ ಆಶಯವನ್ನು ಬೆಂಬಲಿಸುವ ಅವಕಾಶ ದೊರೆತಿರುವಂತೆಯೇ ಮಾಹೆಯ ಬೋಧಕರಿಗೆ ದೊರೆತ ಅತ್ಯುತ್ತಮ ಅವಕಾಶ ಇದಾಗಿದೆ.
ನಮ್ಮ ಬೋಧಕರು ರಾಜ್ಯಮಟ್ಟದ ಮುಖ್ಯ ತರಬೇತಿದಾರರಾಗಿ ಆಯ್ಕೆಯಾಗಿದ್ದು ಜ್ಞಾನ ಮತ್ತು ಕೌಶಲವನ್ನು ಪ್ರಚುರಪಡಿಸುವಲ್ಲಿ ಮುನ್ನೆಲೆಯಲ್ಲಿ ಕಾರ್ಯಪ್ರವೃತ್ತರಾಗಲಿದ್ದಾರೆ.ಎನ್‌ಎಂಸಿಯ ರಾಷ್ಟ್ರೀಯ ಕಾರ್ಯಾಚರಣೆಯ ಯೋಜನೆಯಲ್ಲಿ ಸಹಭಾಗಿಯಾಗಲು ಮಾಹೆ ಹೆಮ್ಮೆ ಪಡುತ್ತದೆ’ ಎಂದರು.
ಪ್ರಸ್ತುತ ಮಾನ್ಯತೆಯ ಮೂಲಕ ಪ್ರತಿಸೂಕ್ಷ್ಮಾಣುಜೀವಿ ನಿರೋಧ [ಆ್ಯಂಟಿಮೆಕ್ರೋಬಿಯಲ್ ರೆಸಿಸ್ಟೆನ್ಸ್]ದ ಕುರಿತ ರಾಷ್ಟ್ರೀಯ ಕಾರ್ಯಯೋಜನೆಯ ಗುರಿಗಳನ್ನು ಸಾಧಿಸುವಲ್ಲಿ ಎನ್‌ಎಸಿಯೊಂದಿಗೆ ಕೈ ಜೋಡಿಸುವ ಅವಕಾಶ ಮಾಹೆಗೆ ಲಭಿಸಿದೆ.