ಬೆಂಗಳೂರು :ಜುಲೈ 18: ಹಳದಿ ಮಾರ್ಗವು ಈ ವರ್ಷದ ಅಂತ್ಯದ ವೇಳೆಗೆ ಶುರುವಾಗಲಿದೆ ಎಂದು ತಿಳಿಸಿದ್ದಾರೆ. ಪ್ರಾರಂಭಿಕವಾಗಿ 15 ನಿಮಿಷಗಳಿಗೆ ಒಂದರಂತೆ ಒಟ್ಟು ಎಂಟು ರೈಲುಗಳು ಸೇವೆಗೆ ಸಿದ್ಧವಿದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ತಿಳಿಸಿದೆ.
ಹೌದು ಈಗಾಗಲೇ ಚಾಲಕ ರಹಿತ ಮೆಟ್ರೋ ಹೊಂದಿರುವ ಹಳದಿ ಮಾರ್ಗ ಡಿಸೆಂಬರ್ ತಿಂಗಳಲ್ಲಿ ಆರಂಭವಾಗಲಿದ್ದು 15 ನಿಮಿಷಗಳಿಗೆ ಬಂದರಂತೆ ಒಟ್ಟು 8 ರೈಲುಗಳನ್ನು ಬಿಡಲಾಗುತ್ತೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ. ಮತ್ತಷ್ಟು ರೈಲು ಬೋಗಿಗಳು ಆಗಸ್ಟ್ ತಿಂಗಳಲ್ಲಿ ಬೆಂಗಳೂರು ತಲುಪುವ ನಿರೀಕ್ಷೆಯಿದೆ.
ಫೆಬ್ರವರಿಯಲ್ಲಿ ಚೀನಾದಿಂದ ಬಂದ ಆರು ಬೋಗಿಗಳನ್ನು ರೈಲಿನೊಂದಿಗೆ ಅಳವಡಿಸಿ ಜೂನ್ 13 ರಂದು ಹಳದಿ ಮಾರ್ಗದಲ್ಲಿ ಪೂರ್ಣ ಪ್ರಮಾಣದ ಪ್ರಯೋಗವನ್ನು ಮಾಡಲಾಗಿತ್ತು. ಆಸಿಲೇಷನ್ ಟ್ರಯಲ್ಸ್ ಮತ್ತು ಸೇಫ್ಟಿ ಕ್ಲಿಯರೆನ್ಸ್ ಸೇರಿದಂತೆ ಟ್ರಯಲ್ ರನ್‌ಗಳು ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಡಿಸೆಂಬರ್‌ನಲ್ಲಿ ವಾಣಿಜ್ಯ ಕಾರ್ಯಾಚರಣೆಗಳು ಪ್ರಾರಂಭವಾಗಬಹುದು.
ಹಾಗಾಗಿ ನಮ್ಮ ಮೆಟ್ರೋ ಹಳದಿ ಮಾರ್ಗದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಸುಮಾರು 19 ಕಿಲೋ ಮೀಟರ್ ಉದ್ದದ ಆರ್‌ವಿ ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಚಾಲಕ ರಹಿತ ವಿದ್ಯುದ್ದೀಕರಣ ಮೆಟ್ರೋ ಸೇವೆಗೆ ಸಿದ್ಧವಾಗಿದೆ.ಈ ಹಿಂದೆ ಪ್ರತಿ 20 ನಿಮಿಷಗಳ ಆವರ್ತನದೊಂದಿಗೆ ಆರರಿಂದ ಏಳು ರೈಲುಗಳನ್ನು ಬಿಟ್ಟು ಹಳದಿ ಮಾರ್ಗ ಸಂಚಾರ ಆರಂಭಿಸಲು ಬಿಎಂಆರ್ಸಿಎಲ್ ಸಿದ್ಧತೆ ನಡೆಸಿತ್ತು. ಆದರೆ ಇದೀಗ ಇದನ್ನು ಬದಲಾಯಿಸಲಾಗಿದೆ.
RV ರಸ್ತೆಯಿಂದ ಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುವ 5,745 ಕೋಟಿ ರೂ. ವೆಚ್ಚದ ಈ ಮಾರ್ಗದಲ್ಲಿ ಪ್ರಮುಖ ಸಿವಿಲ್ ಮತ್ತು ಸಿಸ್ಟಮ್ಸ್ ಕಾಮಗಾರಿಗಳು ಪೂರ್ಣಗೊಂಡಿವೆ. 19.15 ಕಿ.ಮೀ ಮಾರ್ಗದಲ್ಲಿ ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಸೇರಿದಂತೆ 16 ನಿಲ್ದಾಣಗಳಿವೆ.