ಮಣಿಪಾಲ : ಜುಲೈ 18:ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ತನ್ನ 90 ನೇ ವಯಸ್ಸಿನಲ್ಲಿ ಮಣಿಪಾಲದಲ್ಲಿ ಜುಲೈ 17, 2024 ರಂದು ಬುಧವಾರ ರಾತ್ರಿ 9:14 ಕ್ಕೆ ನಿಧನರಾದ ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಮತ್ತು ಗೌರವಾನ್ವಿತ ಶಿಕ್ಷಣ ತಜ್ಞ ಪ್ರೊಫೆಸರ್ ಮಾರ್ತಾಂಡ ವರ್ಮ ಶಂಕರನ್ ವಲಿಯಥಾನ್ (ಎಂ ಎಸ್ ವಲಿಯಥಾನ್) ಅವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದೆ.
ಪ್ರೊಫೆಸರ್ ವಲಿಯಾಥನ್ ಅವರು ಹೃದಯ ಶಸ್ತ್ರಚಿಕಿತ್ಸೆ ಮತ್ತು ವೈದ್ಯಕೀಯ ತಂತ್ರಜ್ಞಾನಕ್ಕೆ ನೀಡಿದ ಗಮನಾರ್ಹ ಕೊಡುಗೆಗಳನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತದೆ . ಅವರು ತಿರುವನಂತಪುರದ ವೈದ್ಯಕೀಯ ಕಾಲೇಜಿನ ಹೆಮ್ಮೆಯ ಹಳೆಯ ವಿದ್ಯಾರ್ಥಿಯಾಗಿದ್ದರು ಮತ್ತು ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಆಫ್ ಎಡಿನ್‌ಬರ್ಗ್, ಇಂಗ್ಲೆಂಡ್ ಮತ್ತು ಕೆನಡಾದಿಂದ ಫೆಲೋಶಿಪ್ ಪಡೆದಿದ್ದರು.
ಅವರು ತಿರುವನಂತಪುರದಲ್ಲಿ ಶ್ರೀ ಚಿತ್ರ ತಿರುನಾಳ್ ಸಂಸ್ಥೆಯನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಮತ್ತು ಇಪ್ಪತ್ತು ವರ್ಷಗಳ ಕಾಲ ಹೃದಯ ಶಸ್ತ್ರಚಿಕಿತ್ಸೆಯ ಪ್ರಾಧ್ಯಾಪಕರಾಗಿ ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಡಿಸ್ಪೋಸಬಲ್ ಬ್ಲಡ್ ಬ್ಯಾಗ್ ಮತ್ತು ಟಿಲ್ಟಿಂಗ್ ಡಿಸ್ಕ್ ಹೃದಯ ಕವಾಟದಂತಹ ವೈದ್ಯಕೀಯ ಸಾಧನಗಳನ್ನು ಅಭಿವೃದ್ಧಿಪಡಿಸುವಲ್ಲಿ ಅವರ ನವೀನ ಕೆಲಸವು ಭಾರತದ ವೈದ್ಯಕೀಯ ಸಾಧನಗಳ ಉದ್ಯಮಕ್ಕೆ ಅಡಿಪಾಯವನ್ನು ಹಾಕಿತ್ತು .
ಪ್ರೊಫೆಸರ್ ವಲಿಯಾಥನ್ ಅವರು 1993 ರಿಂದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ ) ಯ ಮೊದಲ ಉಪಕುಲಪತಿಯಾಗಿ ಸೇವೆ ಸಲ್ಲಿಸಿದ್ದರು . ಮಾಹೆ ಮಣಿಪಾಲದಲ್ಲಿನ ಅವರ ಅಧಿಕಾರಾವಧಿಯು ಶೈಕ್ಷಣಿಕ ಉತ್ಕೃಷ್ಟತೆ ಮತ್ತು ಸಂಶೋಧನೆಯಲ್ಲಿನ ಹೊಸತನದ ಬದ್ಧತೆಯಿಂದ ಗುರುತಿಸಲ್ಪಟ್ಟಿದೆ. ಅವರ ನಾಯಕತ್ವದಲ್ಲಿ, ಮಾಹೆಯು ತನ್ನ ಶೈಕ್ಷಣಿಕ ಕಾರ್ಯಕ್ರಮಗಳನ್ನು ಇನ್ನಷ್ಟು ವಿಸ್ತರಿಸಿತು. ಉನ್ನತ ಶಿಕ್ಷಣದಲ್ಲಿ ಮತ್ತು ಸಂಶೋಧನಾ ವಲಯದಲ್ಲಿ ಗಣನೀಯವಾಗಿ ಸಾಧನೆ ಮಾಡಲು ನಾಂದಿಯಾಯಿತು. ಸಂಸ್ಥೆಯ ಜಾಗತಿಕ ಖ್ಯಾತಿಯನ್ನು ಹೆಚ್ಚಿಸುವ ಮೂಲಕ ಅಂತರಶಿಸ್ತೀಯ ಸಹಯೋಗ ಮತ್ತು ಅಂತರಾಷ್ಟ್ರೀಯ ಸಹಭಾಗಿತ್ವವನ್ನು ಪ್ರೋತ್ಸಾಹಿಸುವ ಪರಿಸರವನ್ನು ಬೆಳೆಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಮಾಹೆ ಮಣಿಪಾಲವನ್ನು ವಿಶ್ವದರ್ಜೆಯ ವಿಶ್ವವಿದ್ಯಾನಿಲಯವನ್ನಾಗಿ ಪರಿವರ್ತಿಸುವಲ್ಲಿ, ಪ್ರಪಂಚದಾದ್ಯಂತದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನು ಆಕರ್ಷಿಸುವಲ್ಲಿ ಮತ್ತು ಭಾರತ ಮತ್ತು ವಿಶ್ವಾದ್ಯಂತದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸುವಲ್ಲಿ ಅವರ ದೃಷ್ಟಿ ಮತ್ತು ಸಮರ್ಪಣೆ ಪ್ರಮುಖವಾಗಿದೆ.
ಪ್ರೊಫೆಸರ್ ವಲಿಯಾಥನ್ ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿ, ಪುರಸ್ಕಾರಕ್ಕೆ ಭಾಜನರಾದರು, ಪದ್ಮವಿಭೂಷಣ (2005), ಪದ್ಮಶ್ರೀ (2002), ಡಾ. ಬಿ. ಸಿ. ರಾಯ್ ರಾಷ್ಟ್ರೀಯ ಪ್ರಶಸ್ತಿ, ಇಂಗ್ಲೆಂಡ್‌ನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್‌ನ ಹಂಟೇರಿಯನ್ ಪ್ರೊಫೆಸರ್‌ಶಿಪ್, ಫ್ರೆಂಚ್ ಸರ್ಕಾರದಿಂದ ಚೆವಲಿಯರ್ ಆಫ್ ದಿ ಆರ್ಡರ್ ಆಫ್ ಪಾಮ್ಸ್ ಅಕಾಡೆಮಿಕ್ಸ್, ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಿಂದ ಅಂತರರಾಷ್ಟ್ರೀಯ ವೈದ್ಯಕೀಯ ಶಿಕ್ಷಣಕ್ಕಾಗಿ ಡಾ. ಸ್ಯಾಮ್ಯುಯೆಲ್ ಪಿ. ಆಸ್ಪರ್ ಪ್ರಶಸ್ತಿ ಮತ್ತು ಭಾರತೀಯ ವೈದ್ಯಕೀಯ ಸಂಘದಿಂದ ಜೀವಮಾನ ಸಾಧನೆ ಪ್ರಶಸ್ತಿ.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ ಅವರ ಕುಟುಂಬ, ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ನಮ್ಮ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತದೆ. ವೈದ್ಯಕೀಯ ವಿಜ್ಞಾನ ಮತ್ತು ಶಿಕ್ಷಣಕ್ಕಾಗಿ ಅವರ ಶ್ರೇಷ್ಠತೆ ಮತ್ತು ಸಮರ್ಪಣೆ ನಮ್ಮೆಲ್ಲರಿಗೂ ಸ್ಫೂರ್ತಿ ನೀಡುತ್ತಲೇ ಇರುತ್ತದೆ ಎಂದಿದೆ .