ಉಡುಪಿ, ಜು.16: ಅಂಬಲಪಾಡಿ ಗಾಂಧಿನಗರದ ಮನೆಯಲ್ಲಿ ಸೋಮವಾರ ಸಂಭವಿಸಿದ ಭೀಕರ ಅಗ್ನಿ ದುರಂತ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಶ್ವಿನಿ ಶೆಟ್ಟಿ(43) ಇಂದು ಮಧ್ಯಾಹ್ನ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಬೆಳಗಿನ ಜಾವ ಮನೆಯಲ್ಲಿ ಮಲಗಿದ್ದ ವೇಳೆ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾಗಿದ್ದು, ಇದರಿಂದ ಮನೆಯೊಳಗೆ ಬೆಂಕಿ ಜೊತೆ ದಟ್ಟ ಹೊಗೆ ಆವರಿಸಿತ್ತು. ಇದರ ಪರಿಣಾಮ ತೀವ್ರವಾಗಿ ಅಸ್ವಸ್ಥಗೊಂಡ ಉದ್ಯಮಿ ರಮಾನಂದ ಶೆಟ್ಟಿ ಹಾಗೂ ಅಶ್ವಿನಿ ಶೆಟ್ಟಿ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು.
ಇದರಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ರಮಾನಂದ ಶೆಟ್ಟಿ ಸೋಮವಾರ ಬೆಳಗ್ಗೆಯೇ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಇತ್ತ ಗಂಭೀರ ಸ್ಥಿತಿಯಲ್ಲಿದ್ದ ಅವರ ಪತ್ನಿ ಅಶ್ವಿನಿ ಶೆಟ್ಟಿ ಇಂದು ಮಧ್ಯಾಹ್ನ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ವೈದ್ಯಾಧಿಕಾರಿಗಳು ಘೋಷಿಸಿದ್ದಾರೆ. ಇವರಿಬ್ಬರ ಅಂತ್ಯಕ್ರಿಯೆ ಆದಿಉಡುಪಿಯ ಪಂದುಬೆಟ್ಟುವಿನಲ್ಲಿರುವ ರಮಾನಂದ ಶೆಟ್ಟಿ ಮೂಲ ಮನೆಯಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಈ ಅಗ್ನಿ ದುರಂತದಲ್ಲಿ ಇವರ ಇಬ್ಬರು ಮಕ್ಕಳಾದ ಅಂಶುಲಾ ಶೆಟ್ಟಿ ಹಾಗೂ ಅಭಿಕ್ ಶೆಟ್ಟಿ ರಕ್ಷಿಸಲ್ಪಟ್ಟಿದ್ದರು. ದಟ್ಟ ಹೊಗೆಯಿಂದ ಪಾರಾಗಲು ಇವರು ಕೂಡಲೇ ಶೌಚಾಲಯಕ್ಕೆ ಹೋಗಿ ಬಾಗಿಲು ಹಾಕಿ ಜೀವ ಉಳಿಸಿಕೊಂಡರು ಎನ್ನಲಾಗಿದೆ ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ