ಬ್ರಹ್ಮಾವರ :ಜುಲೈ 15: ಬ್ರಹ್ಮಾವರ ಕೃಷಿ ಸಂಶೋಧನ ಕೇಂದ್ರದಲ್ಲಿರುವ ಕೃಷಿ ಡಿಪ್ಲೋಮಾ ಕಾಲೇಜನ್ನು ಪುನರಾರಂಭಿಸುವಂತೆ ಹಾಗೂ 2024-25ನೇ ಸಾಲಿನಿಂದಲೇ ಎರಡು ವರ್ಷಗಳ ಕೃಷಿ ಡಿಪ್ಲೋಮಾ ಕೋರ್ಸ್‌ನ್ನು ಮತ್ತೆ ಪ್ರಾರಂಭಿಸುವಂತೆ ರಾಜ್ಯ ಸರಕಾರ ಜು.15ರಂದು ಆದೇಶ ಹೊರಡಿಸಿದೆ ಎಂದು ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.
ರಾಜ್ಯ ಕೃಷಿ ಇಲಾಖೆಯ ಅಧೀನ ಕಾರ್ಯದರ್ಶಿ ಇಂದ್ರ ಎಂ. ಹೊರಡಿಸಿರುವ ಸರಕಾರಿ ಆದೇಶದಲ್ಲಿ ಇಲಾಖೆಯ 33ನೇ ಸಮನ್ವಯ ಸಮಿತಿ ಹಾಗೂ 7ನೇ ಪರಿಣಿತ ಸಮಿತಿ ಸಭೆಯ ತೀರ್ಮಾನದಂತೆ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ದಡಿಯಲ್ಲಿ ಬ್ರಹ್ಮಾವರದ ಕೃಷಿ ಸಂಶೋಧನ ಕೇಂದ್ರದಲ್ಲಿ ಲಭ್ಯವಿರುವ ಕಟ್ಟಡ, ಮೂಲ ಸೌಕರ್ಯ ಹಾಗೂ ಬೋಧನಾ ಸಿಬ್ಬಂದಿಗಳನ್ನು ಬಳಸಿಕೊಂಡು, ಕೃಷಿ ಡಿಪ್ಲೋಮಾ ಕಾಲೇಜನ್ನು 2024-25ನೇ ಸಾಲಿನಿಂದ ಪುನರಾರಂಭಿಸುವಂತೆ ಹಾಗೂ ಇದಕ್ಕಾಗಿ ಸರಕಾರಕ್ಕೆ ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸದಂತೆ ಷರತ್ತು ವಿಧಿಸಿ, 2024- 25ನೇ ಸಾಲಿನಿಂದಲೇ ಎರಡು ವರ್ಷಗಳ ಕೃಷಿ ಡಿಪ್ಲೋಮಾ ಕೋರ್ಸ್ ಆರಂಭಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ.