ಕಾರ್ಕಳ: ಜುಲೈ 15:ಕಾರ್ಕಳದಲ್ಲಿ ಶಾಸಕ ಸುನಿಲ್ ಕುಮಾರ್ ಅವರ ಮಾತಿಗೆ ಅಧಿಕಾರಿಗಳು ಬಲಿಯಾಗುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಜು. 13 ಜನಸ್ಪಂದನ ಸಭೆಯಲ್ಲಿ ಡಿವೈಎಸ್ಪಿ ತೋರಿದ ವರ್ತನೆ ಖಂಡಿಸಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಡಿವೈಎಸ್‌ಪಿ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಯಾರದೋ ಮಾತು ಕೇಳಿ, ಯಾರದೋ ಪ್ರಭಾವಕ್ಕೆ ಮಣಿದು ಸರಕಾರಿ ಅಧಿಕಾರಿಗಳು ಅವರಿಗೆ ಬೇಕಾದಂತೆ ವರ್ತಿಸುತ್ತಿದ್ದಾರೆ. ಸರಕಾರಿ ಅಧಿಕಾರಿ, ಸಿಬ್ಬಂದಿ ವರ್ಗದವರು ಕಾನೂನು ಪ್ರಕಾರವಾಗಿ ಕರ್ತವ್ಯ ಮೆರೆದು ಸಮಾಜವನ್ನು ಒಳ್ಳೆಯ ರೀತಿಯಲ್ಲಿ ಮುನ್ನಡೆಸುವ ಕೆಲಸವನ್ನು ಮಾಡಬೇಕೆಂದು ಅವರು ಹೇಳಿದರು.
ಮಾಜಿ ಸಿಎಂ ಡಾ. ಎಂ. ವೀರಪ್ಪ ಮೊಯ್ಲಿ ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿಯವರು ತೋರಿದ ಮಾರ್ಗ, ಜನರೊಂದಿಗೆ ಯಾವ ರೀತಿ ಸ್ಪಂದಿಸಬೇಕೆಂದು ಅವರು ಹೇಳಿಕೊಟ್ಟ ಹಾದಿಯಲ್ಲಿ ನಡೆಯುವರು ನಾವು. ಕಾರ್ಕಳದಲ್ಲಿ ಈ ರೀತಿಯ ಘಟನೆ ಮರುಕಳಿಸಬಾರದೆಂಬುದು ನಮ್ಮ ಮೂಲ ಉದ್ದೇಶ ಎಂದ ಅವರು ವಿವೇಕ್ ಶೆಟ್ಟಿಯವರು ಪರಶುರಾಮ ಥೀಮ್ ಪಾರ್ಕ್ ವಿಚಾರವಾಗಿ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳುವಾಗ ಶಾಸಕರು ವೀಡಿಯೋ ಚಿತ್ರೀಕರಣ ಮಾಡಬಾರದೆಂದು ಹೇಳಬೇಕಾದರೆ, ನಾವು ಯಾವ ದೇಶದಲ್ಲಿದ್ದೇವೆ ? ಯಾವ ಜಾಗದಲ್ಲಿದ್ದೇವೆ ಎಂದು ಪ್ರಶ್ನಿಸಿದರು.
ನಿನ್ನೆ ನಡೆದ ಘಟನೆಯ ಬಳಿಕವಾದರು ಪರಶುರಾಮ ಥೀಮ್ ಪಾರ್ಕ್‌ಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಯವರು ಸತ್ಯಾಂಶವನ್ನು ಕೋರ್ಟ್‌ಗೆ ಮತ್ತು ಸಿಓಡಿಗೆ ತಿಳಿಸಿದರೆ ಯಾರು ಹೋರಾಟ ಮಾಡುವ ಅವಶ್ಯಕತೆಯಿಲ್ಲ ಸಮಸ್ಯೆ ಪರಿಹಾರವಾಗುತ್ತದೆ ಎಂದ ಅವರು ನಮಗಿಂತ ಜಾಸ್ತಿ ಅವರದೇ ಪಕ್ಷದವರು ಈ ವಿಚಾರವನ್ನು ಕೈ ಬಿಡಬೇಡಿ ಎಂದು ನಮ್ಮ ಬಳಿ ಹೇಳುತ್ತಿದ್ದಾರೆ ಎಂದು ಹೇಳಿದರು.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದ ರಾವ್ ಮಾತನಾಡಿ, ಪೊಲೀಸರ ಮೇಲೆ ಹಲ್ಲೆ ಮಾಡುವ ಪಂಗಡದವರು ನಾವಲ್ಲ. ನಮ್ಮ ನೋವನ್ನು ಶಾಂತಿಯುತವಾಗಿ ನಿಮಗೆ ಹೇಳಲು ಬಂದಿದ್ದೇವೆ. ಪರಶುರಾಮ ಥೀಮ್ ಪಾರ್ಕ್ ವಿಚಾರವನ್ನು ಒಬ್ಬರು ಪ್ರಸ್ತಾಪಿಸಿದಾಗ ಶಾಸಕರು ವೀಡಿಯೋ ಮಾಡಬೇಡಿ ಎಂದು ತಾಕೀತು ಮಾಡುತ್ತಾರೆ. ಅವರಿಗೆ ಆ ರೀತಿ ಹೇಳುವ ಅವಕಾಶವಿಲ್ಲ ಏಕೆಂದರೆ ಅದು ಮುಕ್ತವಾದ ಜನಸ್ಪಂದನಾ ಕಾರ್ಯಕ್ರಮ. ನಾನು ವೀಡಿಯೋ ಚಿತ್ರೀಕರಣ ಮಾಡುವಾಗ ಶಾಸಕರು ಮೊಬೈಲ್ ಸೀಸ್ ಮಾಡಿ ಎಂದು ಆದೇಶಿಸುತ್ತಾರೆ. ಶಾಸಕರು ಆ ರೀತಿ ಆದೇಶ ಮಾಡಿರುವುದು ತಪ್ಪು. ನಮಗೆ ಅಲ್ಲೇ ಪ್ರತಿಭಟನೆ ಮಾಡುವ ಅವಕಾಶವಿದ್ದರೂ ಜನಸ್ಪಂದನ ಕಾರ್ಯಕ್ರಮವನ್ನು ಹಾಳು ಮಾಡಬಾರದೆಂಬುದು ನಮ್ಮ ಉದ್ದೇಶ. ಏಕೆಂದರೆ ಜನಸ್ಪಂದನ ಕಾರ್ಯಕ್ರಮ ಮಾಡಿರುವುದು ನಮ್ಮ ಸರಕಾರ ಎಂದು ಹೇಳಿದರು.
ಜನಸ್ಪಂದನ ಕಾರ್ಯಕ್ರಮದಲ್ಲಿ ಡಿವೈಎಸ್ಪಿಯವರ ವರ್ತನೆ ನಮಗೆ ಬೇಸರ ತಂದಿದೆ. ನಮಗೆ ಪೊಲೀಸರ ಮೇಲೆ ಯಾವುದೇ ದ್ವೇಷವಿಲ್ಲ. ನಾವು ಪರಸ್ಪರ ಸೌಹರ್ದಯುತವಾಗಿ ಕೆಲಸ ಮಾಡುವವರು, ನೀವು ಯೂನಿಫಾರ್ಮ್ ಇರುವ ನಾಗರಿಕರಾದರೆ ನಾವು ಯೂನಿಫಾರ್ಮ್ ಇಲ್ಲದೆ ನಾವು ಪೊಲೀಸರು. ಹಾಗಿರುವಾಗ ನಿಮ್ಮ ನಮ್ಮ ನಡುವೆ ಸಂಬಂಧ ಒಳ್ಳೆಯ ರೀತಿ ಇರಬೇಕೇ ವಿನ: ಈ ರೀತಿಯ ವಾಗ್ವಾದ, ದೌರ್ಜನ್ಯ ಆಗಬಾರದು. ಮೊಬೈಲ್ ಸೀಸ್ ಮಾಡಿ ಎಂದು ಆದೇಶ ನೀಡಿದರೂ ದೌರ್ಜನ್ಯ ಮಾಡಬಾರದಿತ್ತು, ಸೌಜನ್ಯದಿಂದ ಹೇಳಬಹುದಿತ್ತು. ಏಕಾಏಕಿಯಾಗಿ ನಿನ್ನನ್ನು ಹೊರದಬ್ಬುತ್ತೇನೆ, ಅರೆಸ್ಟ್ ಮಾಡುತ್ತೇನೆ ಎನ್ನುವುದು ಸರಿಯಲ್ಲ ಎಂದ ಶುಭದ್ ರಾವ್ ಡಿವೈಎಸ್ಪಿಯವರು ಶಾಸಕರ ಬೌನ್ಸರ ಅಥವಾ ಬಿಜೆಪಿ ಕಾರ್ಯಕರ್ತರ ಎಂದು ಪ್ರಶ್ನಿಸಿದ್ದಾರೆ.
ಪ್ರೀತಿ, ಶಾಂತಿ, ಸೌಹಾರ್ದತೆ, ಅಹಿಂಸೆಗೆ ಕಾರ್ಕಳ ಹೆಸರುವಾಸಿ. ನಿನ್ನೆ ಸಭೆಯಲ್ಲಿದ್ದ ನಾವೆಲ್ಲರೂ ಒಟ್ಟಾಗುತ್ತಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿತ್ತು ಅದು ಇಲಾಖೆ ಮತ್ತು ಸರಕಾರಕ್ಕೆ ಕಪ್ಪು ಚುಕ್ಕೆ. ಆದರೆ ಡಿವೈಎಸ್ಪಿಯವರ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ. ಕಾರ್ಕಳದ ಜನತೆಗೋಸ್ಕರ ಡಿವೈಎಸ್ಪಿಯವರು ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕೆಂದ ಅವರು ನಿಮ್ಮ ಮನಸ್ಸಿನಲ್ಲಿ ನಿನ್ನೆ ತೋರಿದ ವರ್ತನೆ ತಪ್ಪು ಎಂದಾದರೆ ಅದುವೇ ನಿಮಗೆ ಶಿಕ್ಷೆ ಎಂದರು.
ಶಾಸಕರಿಗೆ ಎಷ್ಟು ಕಾರ್ಕಳದಲ್ಲಿ ಹಕ್ಕಿದೆಯೋ ಹಾಗೆಯೇ ಪ್ರತಿಯೊಬ್ಬ ವ್ಯಕ್ತಿಗೂ ಅಷ್ಟೇ ಹಕ್ಕಿದೆ. ಅವರ ಹಕ್ಕುಗಳನ್ನು ರಕ್ಷಿಸುವ ಜವಾಬ್ದಾರಿ ಪೊಲೀಸರದ್ದಾಗಿದೆ. ಈ ಸಮಸ್ಯೆ ಬಂದಿರುವುದೇ ಪರಶುರಾಮನ ನಕಲಿ ಮೂರ್ತಿಯಿಂದಾಗಿ, ಇದರಿಂದ ಕಾರ್ಕಳದಲ್ಲಿ ಅಶಾಂತಿ ಮೂಡಿದೆ. ಇದಕ್ಕೆಲ್ಲಾ ಕಾರಣ ಕಾರ್ಕಳದ ಶಾಸಕರು. ಶಕುನಿಯ ಮಾತು ಕೇಳಿ ಕೌರವ ಪಡೆ ಏನಾಯಿತು ಎಂಬುದು ಪುರಾಣ ಹೇಳುತ್ತದೆ. ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರ ಮಾತು ಕೇಳಿದ ಅಧಿಕಾರಿಗಳಿಗೆ ಎಷ್ಟು ಹಿಂಸೆ ಅನುಭವಿಸುತ್ತಿದ್ದಾರೆ ಎಂಬುದಕ್ಕೆ ನಿನ್ನೆಯ ಘಟನೆಯೇ ಸಾಕ್ಷಿ. ಪರಶುರಾಮನ ಪ್ರಕರಣದಿಂದಾಗಿ ತಹಶೀಲ್ದಾರರಿಂದ ವಿಎ ಸೇರಿದಂತೆ ಎಲ್ಲಾ ಅಧಿಕಾರಿಗಳು ಜೈಲಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಶಾಸಕರ ತಾಳಕ್ಕೆ ಕುಣಿಯುವ ಅಗತ್ಯವಿಲ್ಲ. ನಿಮ್ಮ ಜೊತೆ ನಮ್ಮಸರಕಾರವಿದೆ ಎಂದರು.
ಸುಮೋಟೋ ಕೇಸ್ ದಾಖಲಿಸಲಿ ಜನರ ಸಮಸ್ಯೆಯನ್ನು ಗೌಪ್ಯವಾಗಿಡುವ ನಿಟ್ಟಿನಲ್ಲಿ ವೀಡಿಯೋ ಚಿತ್ರೀಕರಣಕ್ಕೆ ಅವಕಾಶವಿರುವುದಿಲ್ಲ ಎಂದು ಬಿಜೆಪಿ ವಕ್ತಾರ ಹೇಳುತ್ತಾರೆ. ಗೌಪ್ಯವಾಗಿಡಲು ಅಲ್ಲಿ ಫೋಕೋ ಅಥವಾ ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿದ ಸಮಸ್ಯೆ ಬಗ್ಗೆ ಮಾತನಾಡುತ್ತಿರಲಿಲ್ಲ ಎಂದ ಶುಭದ ರಾವ್ ನನ್ನ ತಪ್ಪಿದಲ್ಲಿ ಪೊಲೀಸರು ನನ್ನ ಮೇಲೆ ಸುಮೋಟೋ ಕೇಸ್ ದಾಖಲಿಸಲಿ ಎಂದರು.
ಜನಸ್ಪಂದನ ಸಭೆಯಲ್ಲಿ ಡಿವೈಎಸ್‌ಪಿ ಅರವಿಂದ ಕಲಗುಜ್ಜಿಯವರ ವರ್ತನೆ ಖಂಡಿಸಿ ಹೂ ನೀಡಿ ಸಾಂತ್ವನ, ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯೋಣ ಎಂದು ಬ್ಯಾನರ್ ಹಿಡಿದು ವಿಭಿನ್ನವಾಗಿ ಪ್ರತಿಭಟನೆ ನಡೆಸಿರುವುದು ಗಮನಾರ್ಹವಾಗಿದೆ. ಕೊನೆಗೆ ಕಾರ್ಯಕರ್ತರೆಲ್ಲರೂ ಡಿವೈಎಸ್ಪಿಯವರಿಗೆ ಗುಲಾಬಿ ಹೂ ನೀಡುವ ಮೂಲಕ ಪ್ರತಿಭಟನೆ ಕೊನೆಗೊಳಿಸಿದರು.
ಈ ಸಂದರ್ಭ ಪಕ್ಷದ ಪ್ರಮುಖರಾದ ಸುಭಿತ್ ಎನ್. ಆರ್., ಸುಧಾಕರ್ ಶೆಟ್ಟಿ, ಅನಿತಾ ಡಿಸೋಜ, ಪ್ರತಿಮಾ ರಾಣೆ, ದೀಪಕ್ ಕೋಟ್ಯಾನ್, ಯೋಗೀಶ್ ಇನ್ನಾ ಮೊದಲಾದವರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಅಜಿತ್ ಮಾಳ ಕಾರ್ಯಕ್ರಮ ನಿರ್ವಹಿಸಿದರು.