ತೀರ್ಥಹಳ್ಳಿ:ಜುಲೈ 14:ಪುನರ್ವಸು ಮಳೆಯ ಅಬ್ಬರ ಹೆಚ್ಚಾಗಿದ್ದು, ಅತೀ ಹೆಚ್ಚು ಮಳೆ ಬೀಳುವ ಪ್ರದೇಶವಾಗಿರುವ ಆಗುಂಬೆಯಲ್ಲಿ ಲಘು ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಓಡಾಟ ನಡೆಸುವ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಿದೆ
ಈಗಾಗಲೇ ಭಾರಿ ವಾಹನಗಳ ಸಂಚಾರವನ್ನು ಜಿಲ್ಲಾಧಿಕಾರಿಗಳ ಆದೇಶದಂತೆ ನಿಷೇಧ ಮಾಡಲಾಗಿದ್ದು, ತೀರ್ಥಹಳ್ಳಿ – ಉಡುಪಿ ಮಾರ್ಗವಾಗಿ ಹೋಗುವ ವಾಹನಗಳು ಹುಲಿಕಲ್ ಘಾಟಿ ಮಾರ್ಗವಾಗಿ ಹೋಗುತ್ತಿವೆ. ಈಗ ಆಗುಂಬೆ ಘಾಟಿಯ 5ನೇ ತಿರುವಿನಲ್ಲಿ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿಯಲು ಆರಂಭವಾಗಿದ್ದು, ವಾಹನ ಸವಾರರು ಎಚ್ಚರಿಕೆ ವಹಿಸಬೇಕಿದೆ.
ಕಳೆದ 3 ವರ್ಷಗಳ ಹಿಂದೆ ಕೂಡ 6ನೇ ಸುತ್ತಿನಲ್ಲಿ ಘಾಟಿ ಕುಸಿದಿತ್ತು. ಘಾಟಿ ಕುಸಿದ ಪರಿಣಾಮ ಸಂಚಾರ ಬಂದ್ ಆಗುವ ಸಾಧ್ಯತೆಯಿದೆ. ಈಗಾಗಲೇ ಕುಸಿದಿದ್ದು, ಇನ್ನಷ್ಟು ಘಾಟಿ ಕುಸಿಯುವ ಸಾಧ್ಯತೆ ಇದೆ. ಘಾಟಿ ಕುಸಿದ ಪರಿಣಾಮ ರಸ್ತೆಯ ಮೇಲೆ ಕಲ್ಲುಗಳು ಬಿದ್ದಿದ್ದು ಘಾಟಿಯಲ್ಲಿ ಗುಡ್ಡ ಕುಸಿದ ಹಿನ್ನೆಲೆ ತೆರವು ಕಾರ್ಯಚರಣೆ ಆರಂಭವಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ, ಮಣ್ಣು ತೆರವು ಕಾರ್ಯ ನಡೆಸಿದ್ದು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ರಸ್ತೆಯ ಅರ್ಥ ಭಾಗದಲ್ಲಿ ಕುಸಿದ ಮಣ್ಣಿದ್ದು ಹೀಗಾಗಿ ವಾಹನ ಚಾಲಕರು ಎಚ್ಚರಿಕೆಯಿಂದ ಸಂಚರಿಸಬೇಕು ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ತಿರುವುಗಳಲ್ಲಿ ಮರಗಳು ಬಾಗಿದ್ದು ಭಾರಿ ಮಳೆಯಿಂದ ಮತ್ತಷ್ಟು ಗುಡ್ಡ ಕುಸಿಯಬಹುದಾಗಿದ್ದು ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಬೇಕಾಗಿದೆ.
ಇದೇ ರೀತಿ ಮಳೆ ಮುಂದುವರಿದರೆ ಘಾಟಿ ಮತ್ತಷ್ಟು ಕುಸಿಯು ಭೀತಿಯಲ್ಲಿದ್ದು ಘಾಟಿ ಸಂಚಾರ ಬಂದ್ ಆಗುವ ಭೀತಿ ಎದುರಾಗಿದೆ. ರಸ್ತೆಗೆ ಬಾಗಿದ ಅಪಾಯಕಾರಿ ಮರಗಳ ತೆರವು ಮಾಡಿರುವುದು ಗುಡ್ಡ ಕುಸಿತಕ್ಕೆ ಕಾರಣ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಗುಡ್ಡ ಮತ್ತಷ್ಟು ಕುಸಿದರೆ ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ಈಗಾಗಲೇ ಈ ಹೆದ್ದಾರಿಯಲ್ಲಿ ಭಾರೀ ವಾಹನಗಳ ಸಂಚಾರವನ್ನು ಉಡುಪಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಹೀಗಾಗಿ ಈ ಮಾರ್ಗವಾಗಿ ಹೋಗುವ ವಾಹನಗಳು ಹುಲಿಕಲ್ ಘಾಟಿ ಮಾರ್ಗವಾಗಿ ಸಂಚರಿಸುತ್ತಿವೆ.