ಹುಬ್ಬಳ್ಳಿ:ಜುಲೈ 13:ಶಂಕಿತ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಉಡುಪಿ ಮೂಲದ ನಗರದ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿನಿ ಗುರುವಾರ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಇಲ್ಲಿನ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ 17 ವರ್ಷದ ವಿದ್ಯಾರ್ಥಿನಿ ತೀವ್ರ ಜ್ವರದಿಂದ ಬಳಲುತ್ತಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಕ್ಕೂ ಮುನ್ನ ಜ್ವರ ಬಂದಾಗ ಒಂದು ವಾರ ಸ್ವಯಂ ಔಷಧಿ ಪಡೆದುಕೊಂಡಿದ್ದಳು ಎನ್ನಲಾಗಿದೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ಅವರು ಆಸ್ಪತ್ರೆಯ ವೈದ್ಯರಿಂದ ಮಾಹಿತಿ ಸಂಗ್ರಹಿಸಿದ್ದು, ವಿದ್ಯಾರ್ಥಿನಿಗೆ ಎನ್‌ಎಸ್ 1ಕಾರ್ಡ್ ವಿಧಾನದ ಪರೀಕ್ಷೆಯಲ್ಲಿ ಡೆಂಗ್ಯೂ ಪಾಸಿಟಿವ್ ಬಂದಿದೆ. ಆದರೆ, ದೃಢಪಟ್ಟಿಲ್ಲ.
ಸರ್ಕಾರದ ನಿಯಮದ ಪ್ರಕಾರ, ಎಲಿಸಾ ಮತ್ತು ಐಜಿಎಂ ಪರೀಕ್ಷೆಯಲ್ಲಿ ಡೆಂಗ್ಯೂ ದೃಢಪಡಬೇಕು. ಅದರ ದೃಢೀಕರಣಕ್ಕೆ ನಮ್ಮ ತಜ್ಞರ ತಂಡ ಭೇಟಿ ನೀಡಿ, ಮಾದರಿ ಪರೀಕ್ಷೆ ನಡೆಸಲಿದೆ ಎಂದು ತಿಳಿಸಿದ್ದಾರೆ.