ಬೆಂಗಳೂರು : ಜುಲೈ 13: ಬಿಪಿಎಲ್ ಕಾರ್ಡ್ಗಳಲ್ಲಿ ಅನರ್ಹ ಫಲಾನುಭವಿಗಳು ಇರುವುದು ಗಾಳಿಗೆ ತೂರಿ ಬಿಪಿಎಲ್ ಕಾರ್ಡ್ ಬಳಕೆ ಮಾಡುವರರು ಹೆಚ್ಚಾಗಿದ್ದು, ಅಂತಹವರ ವಿರುದ್ಧ ಕ್ರಮಕ್ಕೆ ಇದೀಗ ಆಹಾರ ಇಲಾಖೆ ಮುಂದಾಗಿದೆ. ಬಡತನ ರೇಖೆ ಮೇಲಿರುವರು ಸಹ ಬಿಪಿಎಲ್ ಕಾರ್ಡ್ ಬಳಕೆ ಮಾಡುತ್ತಿರುವುದು ಪತ್ತೆಯಾಗಿದ್ದು, ಒಟ್ಟು 40 ಲಕ್ಷಕ್ಕೂ ಹೆಚ್ಚು ಅನರ್ಹ ಬಿಪಿಎಲ್ ಕಾರ್ಡ್‌ದಾರರಾರು ಇರುವುದು ಪತ್ತೆಯಾಗಿದೆ. ಈ ಪಟ್ಟಿಯಲ್ಲಿ ಶೇ 20ರಷ್ಟು ಬಿಪಿಎಲ್ ಕಾರ್ಡ್‌ಗಳು ಬೆಂಗಳೂರಿನಲ್ಲಿಯೇ ಇರುವುದು ಪತ್ತೆಯಾಗಿದೆ.
ಅನರ್ಹರು ದುಬಾರಿ ವೆಚ್ಚದ ಆರೋಗ್ಯ ಸೇವೆ, ಕೃಷಿ ಉದ್ದೇಶಿತ ಯೋಜನೆಗಳು, ವಸತಿ ಯೋಜನೆಗಳಂತಹ ನಾನಾ ಸರಕಾರಿ ಸೌಲಭ್ಯಗಳ ಬಳಕೆ ಮಾಡಲು ನಿಯಮ ಮೀರಿ ಕಾರ್ಡ್ ಬಳಕೆ ಮಾಡುತ್ತಿದ್ದಾರೆ. ಸದ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಸದ್ಯ ಬಿಪಿಎಲ್, ಅಂತ್ಯೋದಯ ಅನ್ನ ಯೋಜನೆ ಸೇರಿ 1.27 ಕೋಟಿ ಕಾರ್ಡ್‌ಗಳಿವೆ. 4.36 ಕೋಟಿಗೂ ಅಧಿಕ ಫಲಾನುಭವಿಗಳಿದ್ದಾರೆ. ಇದರಲ್ಲಿ ಲಕ್ಷಾಂತರ ಕಾರ್ಡ್‌ಗಳನ್ನು ಅರ್ಹತೆಯಿಲ್ಲದವರೂ ಪಡೆದುಕೊಂಡು ಅನ್ನಭಾಗ್ಯ, ಗೃಹಲಕ್ಷ್ಮಿ ಸೇರಿದಂತೆ ಸರಕಾರದ ನಾನಾ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇದರಿಂದ ಅರ್ಹರಿಗೆ ಸಿಗಬೇಕಿರುವ ಸೌಲಭ್ಯಗಳು ಉಳ್ಳವರ ಪಾಲಾಗುತ್ತಿದ್ದು, ಅನರ್ಹರ ಕಾರ್ಡ್ ಎಪಿಎಲ್ ಪಟ್ಟಿಗೆ ಸೇರಿಸಲು ಆಹಾರ ಸರಬರಾಜು ಇಲಾಖೆ ಮುಂದಾಗಿದೆ.
ಅನರ್ಹರು ಕೂಡ ಬಿಪಿಎಲ್ ಕಾರ್ಡ್ ಬಳಸುತ್ತಿದ್ದಾರೆ ಎಂಬ ಅನುಮಾನ ಬಂದ ಕೂಡಲೇ ಆಹಾರ ಇಲಾಖೆ ಕಾರ್ಡುದಾರರ ಹೆಸರಿನಲ್ಲಿ ಪರಿಶೀಲನೆ ನಡೆಸಿತ್ತು. ಕಾರ್ಡ್ದಾರರಲ್ಲಿ ವಾಹನಗಳು ಇವೆಯಾ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದರೆ, ಫಲಾನುಭವಿಗಳ ಹೆಸರಲ್ಲಿ ಭೂಮಿ ಎಷ್ಟಿದೆ ಎಂಬ ಮಾಹಿತಿಯನ್ನು ಕಂದಾಯ ಇಲಾಖೆ ನೀಡಿದೆ. ಇನ್ನು, ಐಟಿ ಪಾವತಿ ಬಗ್ಗೆ ಐಟಿ ಇಲಾಖೆಯಿಂದ ಮಾಹಿತಿ ಸಂಗ್ರಹ ಮಾಡಲಾಗಿದ್ದು, ಸರಕಾರಿ ನೌಕರಿ, ಸರಕಾರಿ ಪ್ರಾಯೋಜಿತ ಇಲಾಖೆ, ನಿಗಮ ಮಂಡಳಿಯಲ್ಲಿ ಕೆಲಸ ಮಾಡುತ್ತಿರುವವರ ಬಗ್ಗೆ ಮಾಹಿತಿ ಕಲೆ ಹಾಕಿದೆ. ಅನರ್ಹ ಕಾರ್ಡ್‌ಗಳ ಪತ್ತೆಗಾಗಿ ಆಹಾರ ಇಲಾಖೆಗೆ ಸಾರಿಗೆ, ಕಂದಾಯ ಮತ್ತಿತರ ಇಲಾಖೆಗಳು ಸಾಥ್ ನೀಡಿದ್ದು, ಶೇ 40 ರಷ್ಟು ಅನರ್ಹರು ಪತ್ತೆಯಾಗಿದ್ದಾರೆ