ಕಾರ್ಕಳ :ಜುಲೈ 11:ಜೇಸೀಸ್ ಆಂಗ್ಲ ಮಾಧ್ಯಮ ಶಾಲಾ ವತಿಯಿಂದ ಕೆಸರ್ದ ಗೊಬ್ಬು ಕಾರ್ಯಕ್ರಮವನ್ನು ಕೇರ್ತಾಡಿ ಗುತ್ತು ವೃಷಭರಾಜ್ ಕಡಂಬರ ಮನೆಯಲ್ಲಿ ಆಚರಿಸಲಾಯಿತು. ವೃಷಭರಾಜ್ ಕಡಂಬ ದಂಪತಿಗಳು ತೆಂಗಿನಕಾಯಿ ಒಡೆದು ಗದ್ದೆಗೆ ನೀರು ಚೆಲ್ಲುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ವಲಯ ನಿರ್ದೇಶಕರಾಗಿರುವ ಜೇಸಿ ಅಭಿಲಾಷ್ ರವರು ಮಾತನಾಡುತ್ತಾ, ನಾನು ಯಾವುದೇ ಶಾಲೆಯಲ್ಲಿ ಇಂತಹ ಕಾರ್ಯಕ್ರಮ ನೋಡಿಲ್ಲ. ಇದು ವಿನೂತನ ಕಾರ್ಯಕ್ರಮ. ಇಂದಿನ ಮಕ್ಕಳಿಗೆ ಕೃಷಿ ಪ್ರತ್ಯಕ್ಷಿಕೆಯ ಮನವರಿಕೆ ಮಾಡಿರುವುದು ಬಹಳ ಉತ್ತಮವಾಗಿದೆ. ಅವಕಾಶಗಳನ್ನು ಜೀವನದಲ್ಲಿ ಉತ್ತಮ ರೀತಿಯಲ್ಲಿ ಬಳಸಿಕೊಳ್ಳಿ ಎಂದರು.
ವಲಯ ಸಂಯೋಜಕರಾದ JFM ರೂಪೇಶ್ ನಾಯಕ್ ರವರು ಬಹಳ ಸುಂದರ ಕಾರ್ಯಕ್ರಮ. ಮಕ್ಕಳು ಈ ಕಾರ್ಯಕ್ರಮದ ಸಾರ್ಥಕತೆಯನ್ನು ಅನುಭವಿಸಬೇಕು ಎಂದರು.
ಶಂಕರಬೆಟ್ಟು ಕುಕ್ಕುಂದೂರಿನ ರವೀಂದ್ರ ಮಡಿವಾಳರವರು ಮಾತನಾಡುತ್ತಾ, ತುಳುನಾಡಿನ ಸಂಸ್ಕೃತಿಯ ಪ್ರಾತ್ಯಕ್ಷಿತೆಗೆ ಒತ್ತು ಕೊಡುವ ಇಂತಹ ಶಿಕ್ಷಣ ಸಂಸ್ಥೆಗಳು ಮೂಡುತ್ತಿವೆ. ಅದಕ್ಕೆ ಬೆಂಬಲ ಕೊಡುವ ಕೆಲಸವನ್ನು ಬೇರೆ ಬೇರೆ ಉದ್ಯಮಗಳಲ್ಲಿರುವವರು ಮಾಡಬೇಕು. ಇಂತಹ ಒಂದು ದೊಡ್ಡ ಕೆಲಸವನ್ನು ಜೇಸೀಸ್ ಶಾಲೆ ಮತ್ತು ಕೇರ್ತಾಡಿ ಗುತ್ತಿನವರು ಮಾಡುತ್ತಿದ್ದಾರೆ. ಇನ್ನು ಮುಂದಿನ ದಿನಗಳಲ್ಲೂ ಇಂತಹ ಒಳ್ಳೆಯ ಚಟುವಟಿಕೆಗಳು ಮೂಡಿ ಬರಲಿ ಶುಭವಾಗಲಿ ಎಂದರು.
ಶ್ರೀ ಸನತ್ ಕುಮಾರ್ ಜೈನ್ ಅವರು ಮಾತನಾಡುತ್ತಾ, ಈ ಕಾರ್ಯಕ್ರಮ ನೋಡಿ ತುಂಬಾ ಖುಷಿಯಾಗುತ್ತಿದೆ. ಮಕ್ಕಳು ಕೇವಲ ಕಂಪ್ಯೂಟರ್ ಹಿಡಿದು ಕುಳಿತರೆ ಸಾಲದು. ಕೃಷಿ ಚಟುವಟಿಕೆಗಳನ್ನು ಹಿರಿಯರಿಂದ ತಿಳಿದು ಮುಂದೆ ಬರಬೇಕು. ಈ ಕಾರ್ಯಕ್ರಮಕ್ಕೆ ಶುಭವಾಗಲಿ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಜೇಸಿ ಚಿತ್ತರಂಜನ್ ಶೆಟ್ಟಿಯವರು, ವಲಯ ನಿರ್ದೇಶಕರಾದ ಅಭಿಲಾಷ್ ರವರು, ವಲಯ ಸಂಯೋಜಕರಾದ ರೂಪೇಶ್ ನಾಯಕ್, ವಿಜ್ಞೇಶ್ ಪ್ರಸಾದ್, ಕುಕ್ಕುಂದೂರು ಗ್ರಾಮ ಪಂಚಾಯಿತಿ ಸದಸ್ಯರಾದ ರವಿ ಶೆಟ್ಟಿ, ಭರತ್ ಶೆಟ್ಟಿ, ಸುಭಾಶ್ ಕಾಮತ್, ರಕ್ಷಿತಾ ಭಟ್, ಯೋಗೀಶ್ ಸಾಲಿಯಾನ್, ವೃಷಭರಾಜ್ ಕಡಬ ದಂಪತಿ, ಹಾಗೂ ಶಾಲಾ ಸಂಚಾಲಕರಾದ ಮುರಳಿಧರ ಭಟ್ ಉಪಸ್ಥಿತರಿದ್ದರು.
ನಂತರ ಕೆಸರಿನ ಗದ್ದೆಯಲ್ಲಿ ವಿವಿಧ ಮನೋರಂಜನಾ ಆಟಗಳು, ಲಾಡಿ ಸುರೇಶ್ ಶೆಟ್ಟಿ ಮತ್ತು ಮಿಯ್ಯಾರ್ ಪ್ರಭಾಕರ್ ಶೆಟ್ಟಿ ಅವರಿಗೆ ಸನ್ಮಾನ, ಕಂಬಳದ ಕೋಣಗಳ ಓಟ, ಮಕ್ಕಳಿಂದ ಆಟಿ ಕಲೆಂಜೆ ಮತ್ತು ಡೆನ್ನಾನ ನೃತ್ಯಗಳು ನಡೆದವು.