ಮಣಿಪಾಲ ಜುಲೈ 8, 2024 : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ] ಮಾಹೆ-ವನ್ಯಸ್ಥ ವೈದ್ಯಕೀಯ ಮತ್ತು ಸುರಕ್ಷಾ ಸಂಶೋಧನ ಕೇಂದ್ರ [ಮಾಹೆ-ವೈಲ್ಡರ್‌ನೆಸ್ ಮೆಡಿಸಿನ್ ಆ್ಯಂಡ್ ಕನ್ಸರ್ವೇಶನ್ ರಿಸರ್ಚ್ ಸೆಂಟರ್]ನ್ನು ಇತ್ತೀಚೆಗೆ ಮಣಿಪಾಲದ ಕಂಚಿನಬೈಲುವಿನಲ್ಲಿ ಆರಂಭಿಸಿತು. ಮಾಹೆಯ ವನ್ಯಸ್ಥ ವೈದ್ಯಕೀಯ ಕೇಂದ್ರ [ ಸೆಂಟರ್ ಫಾರ್ ವೈಲ್ಡರ್‌ನೆಸ್ ಮೆಡಿಸಿನ್], ತುರ್ತು ಚಿಕಿತ್ಸಾ ವಿಭಾಗ [ಡಿಪಾರ್ಟ್‌ಮೆಂಟ್ ಆಫ್ ಎಮರ್ಜನ್ಸಿ ಮೆಡಿಸಿನ್] ಮತ್ತು ತುರ್ತು ವೈದ್ಯಕೀಯ ತಂತ್ರಜ್ಞಾನ ವಿಭಾಗ [ಡಿಪಾರ್ಟ್‌ಮೆಂಟ್ ಆಫ್ ಎಮರ್ಜನ್ಸಿ ಮೆಡಿಕಲ್ ಟೆಕ್ನಾಲಜಿ] ಗಳ ಸಹಭಾಗಿತ್ವದೊಂದಿಗೆ ಕಾರ್ಯನಿರ್ವಹಿಸುವ ಕೇಂದ್ರವು ಸುಧಾರಿತ ವನ್ಯಸ್ಥ ವೈದ್ಯಕೀಯ ಮತ್ತು ಪರಿಸರ ಸಂರಕ್ಷಣೆಯ ಆಶಯಕ್ಕೆ ಬದ್ಧವಾಗಿದೆ.
ಉದ್ಘಾಟನ ಸಮಾರಂಭದಲ್ಲಿ ಮಾಹೆಯ ಸಹಕುಲಾಧಿಪತಿಗಳಾದ ಡಾ. ಎಚ್. ಎಸ್. ಬಲ್ಲಾಳ್, ಉಪಕುಲಪತಿಗಳಾದ ಲೆ. ಜ. [ಡಾ.] ಎಂ. ಡಿ. ವೆಂಕಟೇಶ್, ಆರೋಗ್ಯ ವಿಜ್ಞಾನ ವಿಭಾಗದ ಸಹ-ಉಪಕುಲಪತಿಗಳಾದ ಡಾ. ಶರತ್ ಕೆ. ರಾವ್, ಕೆಎಂಸಿಯ ಡೀನ್ ಡಾ. ಪದ್ಮರಾಜ್ ಹೆಗ್ಡೆ, ಯೋಜನೆ ಮತ್ತು ಡಾ. ರವಿರಾಜ ಎನ್.ಎಸ್ (ಸಿ ಓ ಓ ) ಮಾಹೆ ಮಣಿಪಾಲ ಸೇರಿದಂತೆ ಮಾಹೆಯ ವಿವಿಧ ವಿಭಾಗಗಳ ನಿರ್ದೇಶಕರು, ಪ್ರಾಧ್ಯಾಪಕರು ಮತ್ತು ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.
ಅತಿಥಿಗಳು ಸ್ಥಳೀಯ ತಳಿಯ ಗಿಡಗಳನ್ನು ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾಹೆಯ ಸಹಕುಲಾಧಿಪತಿಗಳಾದ ಡಾ. ಎಚ್. ಎಸ್. ಬಲ್ಲಾಳ್ ಅವರು ಮಾತನಾಡುತ್ತ, ‘ಪ್ರಸ್ತುತ ವೈಲ್ಡರ್‌ನೆಸ್ ಮೆಡಿಸಿನ್‌ನ ಉಪಕ್ರಮವು ರಾಷ್ಟ್ರದಲ್ಲಿಯೇ ಗಮನಾರ್ಹ ಪ್ರಯತ್ನವಾಗಿದೆ. ಮಾಹೆಯ ವೈಲ್ಡರ್‌ನೆಸ್ ಆ್ಯಂಡ್ ಕನ್ಸರ್ವೇಶನ್ ರಿಸರ್ಚ್ ಸೆಂಟರ್ ಅನ್ಯ ಕೇಂದ್ರಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸಲಿದೆ’ ಎಂದರು.
ಮಾಹೆಯ ಉಪಕುಲಪತಿಗಳಾದ ಲೆ. ಜ. [ಡಾ.] ಎಂ. ಡಿ. ವೆಂಕಟೇಶ್ ಅವರು ಮಾತನಾಡಿ, ‘ಲಭ್ಯವಿರುವ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಬಳಸಿ, ಉತ್ತಮ ಕೌಶಲ ಮತ್ತು ಜ್ಞಾನದ ಮೂಲಕ ಹೇಗೆ ವನ್ಯಸ್ಥ ಚಿಕಿತ್ಸೆಯನ್ನು ಪರಿಣಾಮಕಾರಿಯಾಗಿಸಲು ಸಾಧ್ಯವಿದೆ’ ಎಂದು ವಿವರಿಸಿದರು.
ಮಾಹೆಯ ಆರೋಗ್ಯ ವಿಜ್ಞಾನ ವಿಭಾಗದ ಸಹ-ಉಪಕುಲಪತಿಗಳಾದ ಡಾ. ಶರತ್ ಕೆ. ರಾವ್ ಅವರು ಮಾತನಾಡುತ್ತ ‘ಕೇಂದ್ರದಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಮುಖ್ಯವಾಗಿ ಸ್ಥಳೀಯವಾಗಿ ಲಭ್ಯವಿರುವ ಮತ್ತು ಮರುಬಳಕೆಯ ವಸ್ತುಗಳನ್ನು ಬಳಸಿ ಸಿದ್ಧಗೊಳಿಸಲಾಗಿದೆ. ಇದು ಪರಿಸರಕ್ಕೆ ಹಾನಿಯಾಗುವುದನ್ನು ತಪ್ಪಿಸುವ ಮತ್ತು ಸುಸ್ಥಿರತೆಯನ್ನು ಉತ್ತೇಜಿಸುವ ಪ್ರಯತ್ನದ ಭಾಗವಾಗಿದೆ’ ಎಂದರು
ಮಾಹೆಯ ಸೆಂಟರ್ ಫಾರ್ ವೆಲ್ಡರ್‌ನೆಸ್ ಮೆಡಿಸಿನ್ ವಿಭಾಗದ ಸಂಚಾಲಕ ಮತ್ತು ಸಹಪ್ರಾಧ್ಯಾಪಕರಾದ ಡಾ. ಫ್ರೆಸ್ಟನ್ ಮಾರ್ಕ್ ಸಿರೂರ್ ಅವರು ಸ್ವಾಗತ ಭಾಷಣ ಮಾಡಿದರೆ, ಡಾ. ವೃಂದಾ ಲಾತ್ ಧನ್ಯವಾದ ಸಮರ್ಪಿಸಿದರು. ಆರಂಭದಲ್ಲಿ ಅರುಂಧತಿ ಹೆಬ್ಬಾರ್ ಪ್ರಾರ್ಥನ ಗೀತೆ ಹಾಡಿದರು.