ಉಡುಪಿ: ಜುಲೈ 08: ಅಪರಿಚಿತ ವ್ಯಕ್ತಿ ಕರೆ ಮಾಡಿದ ಮೇರೆಗೆ ಮಹಿಳೆಯೊಬ್ಬರು ಆತನ ಖಾತೆಗೆ ಸಾವಿರಾರು ರೂ. ವರ್ಗಾಯಿಸಿ ವಂಚನೆಗೊಳಗಾದ ಘಟನೆ ನಡೆದಿದೆ
ಉಡುಪಿಯ ಮಹಿಳೆಯೊಬ್ಬರು ಕರ್ತವ್ಯದಲ್ಲಿದ್ದ ವೇಳೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿದ ವ್ಯಕ್ತಿ ನಾನು ನಿಮ್ಮ ತಂದೆಯ ಸ್ನೇಹಿತ ಡಾ| ಶರ್ಮಾಜಿ ಮಾತನಾಡುವುದಾಗಿ ನಂಬಿಸಿದ್ದಾರೆ. ಬಳಿಕ ಮುಂದುವರಿದು ಆತ ನಿಮ್ಮ ತಂದೆಗೆ ನಾನು 5,000 ರೂ. ಹಣ ನೀಡಲು ಬಾಕಿ ಇದೆ. ಅದನ್ನು ನಾನು ನಿಮ್ಮ ಖಾತೆಗೆ ಹಾಕುತ್ತೇನೆ ಎಂದು ತಿಳಿಸಿದ್ದಾನೆ. ಅನಂತರ ಮಹಿಳೆಯ ಖಾತೆಗೆ 50 ಸಾವಿರ ರೂ. ಜಮೆಯಾಗಿರುವ ಸಂದೇಶ ಬಂದಿದೆ. ಹೆಚ್ಚುವರಿ ಹಣ ಬಂದ ಬಗ್ಗೆ ಮಹಿಳೆ ಆತನಿಗೆ ತಿಳಿಸಿದ್ದಾರೆ.
ಅದಕ್ಕೆ ಆ ವ್ಯಕ್ತಿ ತಪ್ಪಾಗಿ ಹೆಚ್ಚುವರಿ ಹಣ ಬಂದಿದ್ದು, ಅದನ್ನು ನೀವು ವಾಪಸ್ ಹಾಕಿ ಎಂದು ಮತ್ತೂಂದು ಸಂಖ್ಯೆ ನೀಡಿದ್ದಾನೆ. ಅದರಂತೆ ಮಹಿಳೆ 45,000 ರೂ.ಗಳನ್ನು ಫೋನ್‌ಪೇ ಮೂಲಕ ಹಂತಹಂತವಾಗಿ ಪಾವತಿ ಮಾಡಿದ್ದರು. ಬಳಿಕ ಮಹಿಳೆಯ ಖಾತೆಯಿಂದ 2 ಬಾರಿ 20,000 ರೂ. ಕಡಿತಗೊಂಡಿದೆ. ಅನಂತರ 16 ಸಾವಿರ ರೂ.ಜಮೆಯಾಗಿರುವ ಬಗ್ಗೆ ಸಂದೇಶ ಬಂದಿತ್ತು.
ಪರಿಶೀಲಿಸಿದಾಗ ಹಣ ಜಮೆಯಾಗಿರಲಿಲ್ಲ. ಈ ವೇಳೆ ಮಹಿಳೆಗೆ ತಾನು ಮೋಸ ಹೋಗಿರುವ ಬಗ್ಗೆ ತಿಳಿದುಬಂದಿದೆ. ಈ ಬಗ್ಗೆ ಮಣಿಪಾಲ ಠಾಣೆಗೆ ದೂರು ನೀಡಿದ್ದಾರೆ.