ಉತ್ತರ ಕನ್ನಡ : ಜುಲೈ 07:ವಿವಾಹ ಬಯಸುವ ಯುವಕ – ಯುವತಿಯರಿಗೆ ನೆರವಾಗುವ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲಾಡಳಿತವು ವಿನೂತನ ವೇದಿಕೆ ಕಲ್ಪಿಸುತ್ತಿದೆ.ʼಜೀವನ ಸಂಗಮʼ ಎಂಬ ಪೋರ್ಟಲ್ ಆರಂಭಿಸಿರುವ ಉತ್ತರ ಕನ್ನಡ ಜಿಲ್ಲಾಡಳಿತ ವಿನೂತನ ಪ್ರಯೋಗ ಕೈಗೊಂಡಿದೆ. ಜಿಲ್ಲೆಯಲ್ಲಿನ ಅವಿವಾಹಿತ ರೈತರು, ವಿಕಲಚೇತನರು, ವಿಧವೆಯರಿಗೆ ಸೂಕ್ತ ಸಂಗಾತಿ ಆರಿಸಲು ಹಾಗೂ ಹೆಚ್‌ಐವಿ ಪೀಡಿತ ವ್ಯಕ್ತಿಗಳಿಗೆ ಅದೇ ಸಮುದಾಯದ ವ್ಯಕ್ತಿಯ ನಡುವೆ ವೈವಾಹಿಕ ಸಂಬಂಧವನ್ನು ಬೆಸೆದು ಅವರು ವಿವಾಹವಾಗಲು ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ.
ಉತ್ತರಕನ್ನಡ ಜಿಲ್ಲಾಡಳಿತದ ವೆಬ್ಸೈಟ್ https://uttarakannada.nic.in/ನಲ್ಲಿ ‘ಜೀವನ ಸಂಗಮ’ ಎಂಬ ಪೋರ್ಟಲ್ ಅನ್ನು ಆರಂಭಿಸಲಾಗಿದೆ. ಜಿಲ್ಲೆಯಲ್ಲಿನ ಯುವ ರೈತರು, ವಿಕಲಚೇತನರು ಹಾಗೂ ವಿಧವೆಯರಿಗೆ ಸೂಕ್ತ ಸಂಗಾತಿಯ ಆಯ್ಕೆಯನ್ನು ಪರಿಚಯಿಸಲು ಹಾಗೂ ಹೆಚ್‌ಐವಿ ಪೀಡಿತ ವ್ಯಕ್ತಿಗಳಿಗೆ ಅದೇ ಸಮುದಾಯದ ವ್ಯಕ್ತಿಯ ನಡುವೆ ವೈವಾಹಿಕ ಸಂಬಂಧಗಳನ್ನು ಬೆಸೆದು, ಅವರು ವಿವಾಹವಾಗಲು ವೇದಿಕೆ ಸಿಗಲಿದೆ. ಈ ಮೂಲಕ ಅವರ ಬದುಕಿನಲ್ಲಿ ಸುಗಮ, ಅರ್ಥಪೂರ್ಣ ಸಂಬಂಧಗಳು ಏರ್ಪಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ.
ನೋಂದಣಿಗೆ ಶುಲ್ಕವಿಲ್ಲ: ಜೀವನ ಸಂಗಮ ಪೋರ್ಟಲ್ಗೆ ಅರ್ಜಿ ಸಲ್ಲಿಸುವ ಎಲ್ಲ ಅರ್ಹ ಬಳಕೆದಾರರಿಗೆ ಅವರ ವಿವಾಹ ಸಂಬಂಧಗಳಲ್ಲಿ ಸುರಕ್ಷಿತ ಮತ್ತು ಗೌರವಾನ್ವಿತ ವಾತಾವರಣವನ್ನು ಖಾತ್ರಿಪಡಿಸುವ ಜೊತೆಗೆ, ವ್ಯಕ್ತಿಯ ಹಿನ್ನೆಲೆಯನ್ನು ಲೆಕ್ಕಿಸದೆ, ಸಂಬಂಧಗಳನ್ನು ಬಯಸುವ ವ್ಯಕ್ತಿಗಳಿಗೆ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ. ಈ ಪೋರ್ಟಲ್ ಸೇವೆ ಪಡೆಯಲು ಬಳಕೆದಾರರು ಯಾವುದೇ ಶುಲ್ಕಗಳಿಲ್ಲದೇ ನೋಂದಾಯಿಸಿಕೊಳ್ಳಬಹುದು.
ಆರ್ಥಿಕವಾಗಿ ಹಿಂದುಳಿದ ವರ್ಗದವರೂ ಒಳಗೊಂಡಂತೆ, ಶಿಕ್ಷಣದ ಕೊರತೆ ಮತ್ತು ಯಾವುದೇ ಉದ್ಯೋಗವಿಲ್ಲದ ಕಾರಣ ಸೂಕ್ತ ಜೀವನ ಸಂಗಾತಿ ಸಿಗದ ರೈತ ಯುವಕರಿಗೆ ಉತ್ತಮ ವೇದಿಕೆ ಒದಗಿಸಲಿದೆ.ಇದು ಎಲ್ಲ ಬಳಕೆದಾರರಿಗೆ ಅತ್ಯಂತ ಸುರಕ್ಷಿತ ಪೋರ್ಟಲ್ ಆಗಿದ್ದು, ಹೊಂದಾಣಿಕೆಯ ಪ್ರಕ್ರಿಯೆಯಲ್ಲಿ ಎಲ್ಲರ ಗೌಪ್ಯತೆ ಮತ್ತು ಘನತೆಗೆ ಆದ್ಯತೆ ನೀಡಲಾಗಿದೆ. ವಿವಾಹ ಹೊಂದಾಣಿಕೆಯ ಉದ್ದೇಶಕ್ಕಾಗಿ ಮಾತ್ರ ಮಾಹಿತಿಯನ್ನು ಬಳಸಲಾಗುತ್ತದೆ. ವಿವಾಹವಾಗಲು ಸಲ್ಲಿಸುವ ಅರ್ಜಿ ಮತ್ತು ಪ್ರೊಫೈಲ್ಗಳನ್ನು ವ್ಯಕ್ತಿಯು ವಾಸವಾಗಿರುವ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ಸೇರಿದಂತೆ ಉತ್ತರ ಕನ್ನಡ ಜಿಲ್ಲಾಡಳಿತದ ವಿವಿಧ ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ಅರ್ಜಿದಾರರ ಪ್ರೊಫೈಲ್ಗಳಲ್ಲಿನ ನೈಜತೆ ಮತ್ತು ವಿಶ್ವಾಸಾರ್ಹತೆಯನ್ನು ಅವರು ಖಚಿತಪಡಿಸುತ್ತಾರೆ.
ವಿವಾಹವಾಗಲು ಅರ್ಜಿ ಸಲ್ಲಿಸುವ ವ್ಯಕ್ತಿಯ ಹಿನ್ನೆಲೆ, ವಾಸಸ್ಥಳ, ಉದ್ಯೋಗ, ಕೌಟುಂಬಿಕ ಪರಿಸ್ಥಿತಿ, ಆತನ ಆದಾಯ, ಮಾನಸಿಕ ಮತ್ತು ದೈಹಿಕ ಆರೋಗ್ಯ ಸ್ಥಿತಿಗತಿ ಬಗ್ಗೆ ಜಿಲ್ಲೆಯ ವಿವಿಧ ಅಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಲಿದ್ದಾರೆ. ಅರ್ಹ ವ್ಯಕ್ತಿಗಳಿಗೆ ಮಾತ್ರ ಹೊಂದಾಣಿಕೆಯ ಮುಂದಿನ ಪ್ರಕ್ರಿಯೆಯಲ್ಲಿ ಮುಂದುವರೆಯಲು ಅವಕಾಶ ನೀಡಲಾಗುತ್ತದೆ.
ಉತ್ತರ ಕನ್ನಡದವರಿಗೆ ಮಾತ್ರ:ಈ ಸೇವೆಯು ಎಲ್ಲ ಧರ್ಮದವರಿಗೂ ಮುಕ್ತವಾಗಿದ್ದು, ಸಾರ್ವಜನಿಕರು ತಮ್ಮ ಧಾರ್ಮಿಕ ಅದ್ಯತೆಗಳನ್ನು ಮ್ಯಾಚ್ ಮೇಕಿಂಗ್‌ಗೆ ನಿರ್ದಿಷ್ಟಪಡಿಸಲು ಅವಕಾಶ ನೀಡುವುದರ ಜೊತೆಗೆ, ತಮ್ಮದೇ ಆದ ಜಾತಿಯೊಳಗೆ ಹೊಂದಾಣಿಕೆಗಳನ್ನು ಆಯ್ಕೆ ಮಾಡಬಹುದು. ಜೊತೆಗೆ, ಅಂತರ್ಜಾತಿ ಆಯ್ಕೆಗಳಿಗೂ ಅವಕಾಶವಿದ್ದು, ವೈಯಕ್ತಿಕ ಆದ್ಯತೆಗಳ ಆಧಾರದ ಮೇಲೆ ತಮಗೆ ಇಚ್ಚಿಸುವ ಹೊಂದಾಣಿಕೆಯನ್ನು ಆಯ್ಕೆ ಮಾಡಬಹುದು. ಉತ್ತರ ಕನ್ನಡ ಜಿಲ್ಲೆಯ ಸ್ಥಳೀಯ ಅರ್ಹ ಯುವಕ – ಯುವತಿಯರಿಗೆ ಮಾತ್ರ ಈ ವಿವಾಹ ಹೊಂದಾಣಿಕೆಗೆ ಅವಕಾಶವಿದೆ.
ಅಂತರ್ಜಾತಿ ಮತ್ತು ವಿಕಲಚೇತನರನ್ನು ವಿವಾಹವಾಗುವವರಿಗೆ ಸರ್ಕಾರದಿಂದ ದೊರೆಯುವ ಪ್ರೋತ್ಸಾಹ ಧನ ಸೇರಿದಂತೆ ಎಲ್ಲ ರೀತಿಯ ನೆರವು ಒದಗಿಸಲಾಗುವುದು. 10ಕ್ಕಿಂತ ಹೆಚ್ಚು ಜೋಡಿಗಳು ಒಪ್ಪಿಗೆ ನೀಡಿದಲ್ಲಿ ವಿವಿಧ ಸಂಘ – ಸಂಸ್ಥೆಗಳ ನೆರವಿನಿಂದ ಸಾಮೂಹಿಕ ವಿವಾಹ ಏರ್ಪಡಿಸುವ ಚಿಂತನೆ ಇದೆ. ಜಿಲ್ಲೆಯ ಅನಾಥಾಶ್ರಮಗಳಲ್ಲಿನ ಯುವತಿಯರಿಗೂ ಸಹ ಈ ಪೋರ್ಟಲ್ ಮೂಲಕ ಸೂಕ್ತ ಜೀವನ ಸಂಗಾತಿ ಒದಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.