ಮಣಿಪಾಲ : ಜುಲೈ 6 : ಮಣಿಪಾಲದ ಪ್ರಸನ್ನ ಸ್ಕೂಲ್ ಪಬ್ಲಿಕ್ ಹೆಲ್ತ್‌ನ ನೂತನ ನಿರ್ದೇಶಕ ಮತ್ತು ಪ್ರಾಧ್ಯಾಪಕರಾಗಿ ಡಾ. ಚೆರಿಯನ್ ವರ್ಗೀಸ್ ಅವರನ್ನು ಮಣಿಪಾಲ್ ಅಕಾಡೆಮಿ ಆಫ್ ಹೆಯರ್ ಎಜುಕೇಶನ್ [ಮಾಹೆ] ನೇಮಕಗೊಳಿಸಿದೆ. ಡಾ. ವರ್ಗೀಸ್ ಅವರು ವಿಶ್ವ ಆರೋಗ್ಯ ಸಂಸ್ಥೆ [ಡಬ್ಲ್ಯುಎಚ್‌ಒ] ನಲ್ಲಿ ಎರಡು ದಶಕಗಳಿಂದ ಸೇವೆ ಸಲ್ಲಿಸಿದ್ದು, ಅಲ್ಲಿ ಅಸಾಂಕ್ರಾಮಿಕ ರೋಗಗಳು [ನಾನ್ ಕಮ್ಯುನಿಕೇಬಲ್ ಡಿಸೀಸಸ್-ಎಸ್‌ಸಿಡಿ] ಮತ್ತು ನಿರ್ಧಾರಕಗಳ ವಿಭಾಗದ ಸಂಚಾಲಕರಾಗಿ ಮತ್ತು ನವದೆಹಲಿಯಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಪ್ರಾದೇಶಿಕ ಕಚೇರಿಯಲ್ಲಿ ಆರೋಗ್ಯವಂತ ಜನಸಮುದಾಯ ಮತ್ತು ಅಸಾಂಕ್ರಾಮಿಕ ರೋಗಗಳು [ಹೆಲ್ತಿಯರ್‌ಪಾಪ್ಯುಲೇಶನ್ಸ್ ಮತ್ತು ನಾನ್‌ಕಮ್ಯುನಿಕೇಬಲ್ ಡಿಸೀಸಸ್-ಎಚ್‌ಪಿಎನ್] ವಿಭಾಗದ ಪ್ರಭಾರಿ ನಿರ್ದೇಶಕರಾಗಿ ಸೇವೆಸಲ್ಲಿಸಿದ್ದರು. ಅವರ ಅಧಿಕಾರವಧಿಯಲ್ಲಿ ಹೃದಯ ರಕ್ತನಾಳದ ರೋಗಗಳ ನಿಯಂತ್ರಣ ಕಾರ್ಯಕ್ರಮವಾದ ಸೀಹಾರ್ಟ್ಸ್ [SEAHEARTS] ನ್ನು ಮತ್ತು ಅರ್ಬುದ [ಕ್ಯಾನ್ಸರ್] ರೋಗ ನಿಯಂತ್ರಣವನ್ನು ವೃದ್ಧಿ ಪಡಿಸುವುದಕ್ಕಾಗಿ ಸೀಕ್ಯಾನ್‌ಗ್ರಿಡ್ [SEACANGRID] ಕಾರ್ಯಕ್ರಮವನ್ನು ಉಪಕ್ರಮಿಸಿದ್ದರು.
ಕೇರಳ ವಿಶ್ವವಿದ್ಯಾನಿಲಯದಲ್ಲಿ 1985 ರಲ್ಲಿ ವೈದ್ಯಕೀಯ ಪದವಿಮುಗಿಸಿರುವ ಡಾ. ವರ್ಗೀಸ್ ವೈದ್ಯಕೀಯ ವಿಕಿರಣ ಚಿಕಿತ್ಸೆ [ಮೆಡಿಕಲ್ ರೇಡಿಯೋಥೆರಪಿ-ಡಿಎಂಆರ್‌ಟಿ]ಯಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದಾರೆ. ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ವಿಕಿರಣಾತ್ಮಕ ಗ್ರಂಥಿ ವಿಜ್ಞಾನ [ರೇಡಿಯೇಶನ್ ಆಂಕಾಲಜಿ]ಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಎಂಫಿಲ್ ಪತ್ತು ಫಿನ್‌ಲೆಂಡ್‌ನ ಟ್ಯಾಂಪೀರ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಡಾ. ವರ್ಗೀಸ್ 2001 ರಲ್ಲಿ ನೇಶನಲ್ ಅಕಾಡೆಮಿ ಆಫ್ ಮೆಡಿಕಲ್ ಸಾಯನ್ಸಸ್ ಇನ್ ಕ್ಲಿನಿಕಲ್ ಎಪಿಡಿಮಿಯೋಲಜಿ [ಎಂಎನ್‌ಎಎಂಎಸ್]ಯ ಸದಸ್ಯತನದ ಗೌರವ ಪಡೆದಿದ್ದಾರೆ. 1990 ರಲ್ಲಿ ತಿರುವನಂತಪುರದ ರೀಜನಲ್ ಕ್ಯಾನ್ಸರ್ ಸೆಂಟರ್‌ನಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿ, 2001 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯನ್ನು ಸೇರಿದರು. ಶೈಕ್ಷಣಿಕ ನಿಯತಕಾಲಿಕೆಗಳಲ್ಲಿ ಸುಮಾರು 90 ಕ್ಕಿಂತಲೂ ಅಧಿಕ ಪ್ರಕಟಣೆಗಳನ್ನು ಹೊಂದಿರುವ ಡಾ. ವರ್ಗೀಸ್ ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಮತ್ತು ಫೆಲೋಶಿಪ್‌ಗಳಿಗೆ ಭಾಜನರಾಗಿದ್ದಾರೆ.
ಮಾಹೆಯ ಉಪಕುಲಪತಿಗಳಾದ ಲೆ. ಜ. [ಡಾ. ಎಂ. ಡಿ. ವೆಂಕಟೇಶ್ ಅವರು ಮಾಹೆ ಬಳಗಕ್ಕೆ ಡಾ. ಚೆರಿಯರ್ ವರ್ಗೀಸ್ ಅವರನ್ನು ಹಾರ್ದಿಕವಾಗಿ ಸ್ವಾಗತಿಸುತ್ತ, ‘ಡಾ. ವರ್ಗೀಸ್ ಅವರ ಅಗಾಧ ಅನುಭವ ಮತ್ತು ಸಾಮುದಾಯಿಕ ಆರೋಗ್ಯ ಕ್ಷೇತ್ರಕ್ಕೆ ನೀಡಿರುವ ಮಹತ್ತ್ವದ ಕೊಡುಗೆಯು ಪ್ರಸನ್ನ ಸ್ಕೂಲ್ ಪಬ್ಲಿಕ್ ಹೆಲ್ತ್‌ನ ಶೆಕ್ಷಣಿಕ ಮತ್ತು ಸಂಶೋಧನ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಲಿದೆ. ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಮಾಹೆಯ ಬದ್ಧತೆಯನ್ನು ನಿರಂತರವಾಗಿಸುವಲ್ಲಿ ಡಾ. ವರ್ಗೀಸ್ ಕೈಜೋಡಿಸಲಿದ್ದಾರೆ. ಅಸಾಂಕ್ರಾಮಿಕ ರೋಗಗಳ ನಿಯಂತ್ರಣವೂ ಸೇರಿದಂತೆ ವಿವಿಧ ವಿಭಾಗಳಲ್ಲಿ ಡಾ. ವರ್ಗೀಸ್ ಮಾಡಿರುವ ಮಹತ್ತ್ವದ ಕೆಲಸಗಳು ಮಾಹೆಯ ಅವರ ವೃತ್ತಿಜೀವನಕ್ಕೆ ಪೂರಕವಾಗಲಿದೆ’ ಎಂದರು.