ಉಡುಪಿ : ಜುಲೈ 05:ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಮಳೆಯ ಆರ್ಭಟ ಮುಂದುವರೆದಿದೆ . ಮುನ್ನೆಚ್ಚರಿಕಾ ಕ್ರಮವಾಗಿ ಬ್ರಹ್ಮಾವರ ಹಾಗೂ ಕುಂದಾಪುರ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಕುಂದಾಪುರ ಸಹಾಯಕ ಆಯುಕ್ತರಾದ ರಶ್ಮಿ ಎಸ್.ಆರ್ ಆದೇಶ ಹೊರಡಿಸಿದ್ದಾರೆ
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜುಲೈ 6 ರಂದು ಕುಂದಾಪುರ ಹಾಗೂ ಬ್ರಹ್ಮಾವರ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಉಳಿದಂತೆ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ಇಂಜಿನಿಯರಿಂಗ್, ಐಟಿಐ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲ.
ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹಾಜರಾತಿ ಕಡ್ಡಾಯ ಮಾಡುವಂತಿಲ್ಲ. ಕಾಲೇಜುಗಳ ಮುಖ್ಯಸ್ಥರು ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸುವಾಗ ಹಾಗೂ ಮನೆಗೆ ತೆರಳುವಾಗ ಯಾವುದೇ ಅಪಾಯವಿಲ್ಲದೇ ಸುರಕ್ಷಿತವಾಗಿ ತಲುಪಿಸುವ ಕಾರ್ಯವನ್ನು ಮಾಡಬೇಕು.
ನದಿ, ಹಳ್ಳ, ತೋಡುಗಳನ್ನು ದಾಟಿಕೊಂಡು ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಸುರಕ್ಷತೆಯ ದೃಷ್ಠಿಯಿಂದ ಮನೆಯಲ್ಲಿಯೇ ಇರುವಂತೆ ಸೂಚನೆಯನ್ನು ನೀಡಬೇಕು. ಮಳೆಯ ಹಿನ್ನೆಲೆಯಲ್ಲಿ ನೀಡಿರುವ ರಜೆಯನ್ನು ಶನಿವಾರ, ಭಾನುವಾರದಂದು ಹೆಚ್ಚುವರಿ ತರಗತಿಗಳನ್ನು ನಡೆಸಿ, ಶೈಕ್ಷಣಿಕ ವೇಳಾಪಟ್ಟಿಯಲ್ಲಿ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಬೈಂದೂರು, ಕುಂದಾಪುರ, ಬ್ರಹ್ಮಾವರ ತಾಲೂಕುಗಳಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಜುಲೈ 5, ಶುಕ್ರವಾರ ಮುಂಜಾಗ್ರತಾ ಕ್ರಮವಾಗಿ ಈ ಮೂರು ತಾಲೂಕುಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.