ಉಡುಪಿ: ಜುಲೈ 05:ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕುಂದಾಪುರ, ಬೈಂದೂರು ಮತ್ತು ಬ್ರಹ್ಮಾವರ ತಾಲೂಕಿನ ಶಾಲೆಗಳಿಗೆ ಜುಲೈ 05 ರಂದು ಜಿಲ್ಲಾಡಳಿತ ರಜೆ ಘೋಷಿಸಿದೆ.
ಕುಂದಾಪುರ, ಬೈಂದೂರು ಮತ್ತು ಬ್ರಹ್ಮಾವರ ಭಾಗದಲ್ಲಿ ತಗ್ಗು ಪ್ರದೇಶಗಳು ನೆರೆ ನೀರಿನಿಂದ ಜಲಾವೃತವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕುಂದಾಪುರ, ಬೈಂದೂರು ಮತ್ತು ಬ್ರಹ್ಮಾವರ ವಲಯದ ಅಂಗನವಾಡಿ , ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪಿಯು ಕಾಲೇಜುಗಳಿಗೆ ಶುಕ್ರವಾರ (ಜುಲೈ 5) ರಜೆ ಘೋಷಣೆ ಮಾಡಲಾಗಿದೆ.
ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಮತ್ತು ಪಿಯುಸಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಐಟಿಐ ಹೊರತುಪಡಿಸಿ, ಪದವಿ ಕಾಲೇಜುಗಳು, ಡಿಪ್ಲೊಮಾ ಕಾಲೇಜುಗಳು, ಎಂಜಿನಿಯರಿಂಗ್ ಮತ್ತು ಸ್ನಾತಕೋತ್ತರ ತರಗತಿಗಳು ಕಾರ್ಯನಿರ್ವಹಿಸಲಿದೆ ಎಂದು ಕುಂದಾಪುರ ಉಪ ವಿಭಾಗ ಸಹಾಯಕ ಆಯುಕ್ತೆ ರಶ್ಮಿ ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕರು ಮಳೆ ಹೆಚ್ಚಾಗಿರುವ ಕಾರಣ ಅಗತ್ಯ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಡಳಿತ ಸಲಹೆ ನೀಡಿದೆ. ನೆರೆ ಸಂಬಂಧಿತ ಜನರ ನೆರವಿಗೆ ಬರಲು ವ್ಯವಸ್ಥೆಗಳನ್ನೂ ಮಾಡಿಕೊಂಡಿದೆ.