ಬೈಂದೂರು: ಜುಲೈ 03:ತಂದೆ ತನ್ನ ವಿಶೇಷ ಚೇತನ ಮಗುವನ್ನು ಹೆಗಲಮೇಲೆ ಕೂರಿಸಿಕೊಂಡು ತೋಡು ದಾಟುವ ದೃಶ್ಯ ಕಂಡ ತಕ್ಷಣವೇ ಇದು ಕ್ಷೇತ್ರವ್ಯಾಪ್ತಿಯ ಯಳಜಿತ್ ನಲ್ಲಿ ನಡೆದಿರುವುದು ಎಂಬುದನ್ನು ಖಚಿತಪಡಿಸಿಕೊಂಡು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಸ್ಥಳಕ್ಕೆ ಧಾವಿಸಿ, ಮಕ್ಕಳನ್ನು, ಅವರ ಪಾಲಕ ಪೋಷಕರನ್ನು ಭೇಟಿ ಮಾಡಿ ತುರ್ತು ಅಗತ್ಯಗಳಿಗೆ ಸ್ಪಂದಿಸಿ, ತಾತ್ಕಾಲಿಕ ವ್ಯವಸ್ಥೆ ರೂಪಿಸಿದರು.
ಸರಿಯಾದ ಕಾಲು ಸಂಕ ವ್ಯವಸ್ಥೆ ಇಲ್ಲದೆ ಕ್ಷೇತ್ರದ ಕೆಲವು ಭಾಗದಲ್ಲಿ ಆಗುತ್ತಿರುವ ಸಮಸ್ಯೆ ಗಮನಕ್ಕೆ ಬಂದಿದೆ. ತುರ್ತಾಗಿ ಅಲ್ಲೆಲ್ಲ ಏನು ಮಾಡಬೇಕು ಎಂಬುದನ್ನು ಕಾರ್ಯಕರ್ತರಿಗೆ ನಿರ್ದೇಶನಗಳನ್ನು ನೀಡಲಾಗಿದೆ. ಯಳಜಿತ್ ಗ್ರಾಮದ ಹುಲ್ಕಡ್ಕಿ ಗುಡಿಕೇರಿಯಲ್ಲಿನ ಸಮಸ್ಯೆಯನ್ನು ಹತ್ತಿರದಿಂದ ಬಲ್ಲೇನು. ತಾತ್ಕಾಲಿಕ ನೆಲೆಯಲ್ಲೇ ಏನೆಲ್ಲ ಪರಿಹಾರ ಕಾರ್ಯ ಸೂಚಿಸಲು ಸಾಧ್ಯವೋ ಅದನ್ನು ತುರ್ತಾಗಿ ಮಾಡುತ್ತಿದ್ದೇವೆ. ಶಾಶ್ವತ ವ್ಯವಸ್ಥೆಯನ್ನು(ಕಾಲುಸಂಕ) ರೂಪಿಸಲು ಯೋಜನೆ ಸಿದ್ಧಪಡಿಸಲಾಗುವುದು ಎಂದು ಬೈಂದೂರಿನ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಹೇಳಿದರು.
ಯಳಜಿತ್ ಗ್ರಾಮದ ಹುಲ್ಕಡ್ಕಿ ಗುಡಿಕೇರಿಯಲ್ಲಿ ವಾಸಿಸುತ್ತಿರುವ ಕುಟುಂಬದವರ 2 ವಿಶೇಷ ಚೇತನ ಮಕ್ಕಳಿಗೆ ಶಾಲೆಗೆ ಹೋಗಲು ಮಾರ್ಗ ಮಧ್ಯದಲ್ಲಿ ತೋಡಿನಿಂದ ಮಳೆಗಾಲದಲ್ಲಿ ಸಮಸ್ಯೆ ಎದುರಾಗುತ್ತಿದೆ. ತಂದೆ ತನ್ನ ಮಗನನ್ನು ಎತ್ತಿಕೊಂಡು ಆ ಹೊಳೆಯನ್ನು ದಾಟುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ನಿಜಕ್ಕೂ ಇದು ಮನಕಲುಕುವ ದೃಶ್ಯ. ವಾಸ್ತವವೆಂದರೆ ಇಷ್ಟು ವರ್ಷಗಳಿಂದ ಜನಪ್ರತಿನಿಧಿಗಳು ಅಲ್ಲಿನ ಕಡೆ ಗಮನ ಹರಿಸದೇ ಇದ್ದಿದ್ದು ಸಮಸ್ಯೆಗೆ ಮೂಲ ಕಾರಣ. ಹೊಳೆ ದಾಟಿ ಶಾಲೆಗೆ ತೆರಳಲು ಕಾಲುಸಂಕವಿಲ್ಲದೆ ಪರದಾಡುತ್ತಿರುವ ಈ ದೃಶ್ಯವನ್ನು ನೋಡಿದ ಬೈಂದೂರಿನ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ತಕ್ಷಣವೇ ಆ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಅಲ್ಲಿನ ಕುಟುಂಬದವರನ್ನು ಭೇಟಿ ಮಾಡಿ ಮಳೆಗಾಲ ನಿಲ್ಲುವವರೆಗೆ ಮತ್ತು ಕಾಲುಸಂಕ ನಿರ್ಮಾಣ ಆಗುವವರೆಗೆ ಆ ಮಕ್ಕಳಿಗೆ ತೊಂದರೆ ಆಗಬಾರದೆಂದು ತಕ್ಷಣವೇ ಸ್ಥಳೀಯ ಕಾರ್ಯಕರ್ತರ ನೆರವಿನೊಂದಿಗೆ ಪ್ರತ್ಯೇಕ ಮನೆ ವ್ಯವಸ್ಥೆ ಮಾಡಲು ಯೋಜನೆ ರೂಪಿಸಿದರು. ಸ್ಥಳೀಯ ಕಾರ್ಯಕರ್ತರು ಹಾಗೂ ಪ್ರಮುಖರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.
*ಸ್ವಂತ ಮನೆಯಲ್ಲಿಯೇ ವ್ಯವಸ್ಥೆಗೆ ಸಿದ್ಧ*
ಇದು ಸಾಧ್ಯವಾಗದೇ ಇದ್ದಲ್ಲಿ ಶಾಸಕರು ಸ್ವತಃ ತಮ್ಮ ಮನೆಗೇ ಬಂದು ವಾಸಿಸಬಹುದು ಎಂದು ಮಕ್ಕಳಿಗೆ ಧೈರ್ಯ ತುಂಬಿದರು ಮತ್ತು ಯಾವುದೇ ಕಾರಣಕ್ಕೂ ಶಿಕ್ಷಣ ನಿಲ್ಲಿಸಬಾರದು ಎಂದು ಮನವಿ ಮಾಡಿದರು.
*ಮಕ್ಕಳ ಆರೋಗ್ಯ ವ್ಯವಸ್ಥೆ*
ಈ ಭಾಗದಲ್ಲಿ ಶೀಘ್ರದಲ್ಲೇ ಕಾಲು ಸಂಕ ನಿರ್ಮಿಸುವುದರೊಂದಿಗೆ, ಆ ಮಕ್ಕಳ ಆರೋಗ್ಯದ ಬಗ್ಗೆಯೂ ಮುಂದಿನ ದಿನಗಳಲ್ಲಿ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದ್ದಾರೆ.
*ವಿಶೇಷ ಮಾದರಿ ಕಾಲುಸಂಕ*
ಬೈಂದೂರು ಕ್ಷೇತ್ರದಲ್ಲಿ ಕಾಲು ಸಂಕಗಳ ತುರ್ತು ಅಗತ್ಯತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಸಮೃದ್ಧ ಬೈಂದೂರು ಟ್ರಸ್ಟ್ ಹಾಗೂ ಬೆಂಗಳೂರಿನ ಅರುಣಾಚಲಂ ಟ್ರಸ್ಟ್ ಸಹಯೋಗದಲ್ಲಿ ಈಗಾಗಲೇ ಹಲವು ಕಡೆಗಳಲ್ಲಿ ಜಾಗ ಗುರುತಿಸಿ ವಿಶೇಷ ಮಾದರಿಯಲ್ಲಿ ಕಾಲು ಸಂಕ ನಿರ್ಮಾಣ ಮಾಡಲಾಗುತ್ತಿದೆ. ಎರಡು ಕಾಲು ಸಂಕಗಳು ಶೀಘ್ರ ಬಳಕೆಗೂ ಲಭ್ಯವಾಗಲಿದೆ.