ಕಾರ್ಕಳ :ಜುಲೈ 02:ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 169 ಕಾಮಗಾರಿ ಸಮಸ್ಯೆಗಳ ಬಗ್ಗೆ ವಿವರ ಸಂಗ್ರಹ ಪರಿಹಾರಕ್ಕಾಗಿ ಪಂಚಾಯತ್ ಅಧ್ಯಕ್ಷರಾದ ಶ್ರೀ ಯುವರಾಜ್ ಜೈನ್ ನೇತೃತ್ವದಲ್ಲಿ ಸಭೆ ಜುಲೈ 1 ಸೋಮವಾರ ಸಂಜೆ 4:30 ಗಂಟೆಗೆ ಸುವರ್ಣ ಗ್ರಾಮದ ಸೌಧದಲ್ಲಿ ಜರುಗಿತು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಎಂ ಸಿ ಮಧುರವರು ಕಳೆದ ಎರಡು ವರ್ಷದಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾರಂಭವಾದ ಬಳಿಕ ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎದುರಿಸುತ್ತಿರುವ ಹಲವಾರು ಸಮಸ್ಯೆಗಳು ಇದರ ಪರಿಹಾರಕ್ಕಾಗಿ ನಡೆದ ವಿವಿಧ ಸಭೆಗಳು ಅಧಿಕಾರಿಗಳ ಭೇಟಿ ,ಜನ ಪ್ರತಿನಿಧಿಗಳು ಮತ್ತು ಹೆದ್ದಾರಿ ಇಲಾಖೆಗೆ ಬರೆದ ಪತ್ರಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಸಾಣೂರು ಗ್ರಾಪಂ ಮಾಜಿ ಅಧ್ಯಕ್ಷರು ಹಾಗೂ ಹೆದ್ದಾರಿ ಭೂಮಾಲಕರ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ರವರು ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಣೂರು ಪುಲ್ಕೇರಿ ಬೈಪಾಸ್ ನಿಂದ ಮುರತಂಗಡಿ ಸಾಣೂರು ಪದವಿ ಪೂರ್ವ ವಿದ್ಯಾಲಯದವರೆಗೆ ನಾಲ್ಕುವರೆ ಕಿಲೋಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಸಂದರ್ಭದಲ್ಲಿ ಜನರಿಗಾಗುತ್ತಿರುವ ತೊಂದರೆಗಳನ್ನು ತಿಳಿಸಿ,ಶಾಸಕರಾದ ಶ್ರೀ ವಿ. ಸುನಿಲ್ ಕುಮಾರ್ ನೇತೃತ್ವದಲ್ಲಿ ನೂತನ ಸಂಸದರು, ಉಡುಪಿ ಜಿಲ್ಲಾಧಿಕಾರಿ,ರಾಷ್ಟ್ರೀಯ ಹೆದ್ದಾರಿ ಇಲಾಖೆ ಭೂಸ್ವಾದಿನಾಧಿಕಾರಿ ಮತ್ತು ಗುತ್ತಿಗೆದಾರ ಕಂಪನಿ ದಿಲೀಪ್ ಬಿಲ್ಡ್ ಕಾನ್ ಉನ್ನತ ಅಧಿಕಾರಿಗಳ ಜೊತೆ ಸಮಸ್ಯೆಗಳ ಪರಿಹಾರಕ್ಕಾಗಿ ಉನ್ನತ ಮಟ್ಟದ ಸಭೆ ( ಜುಲೈ 12 ಶುಕ್ರವಾರ ಮಧ್ಯಾಹ್ನ 12:00 ಗಂಟೆ)ಯ ಪೂರ್ವಭಾವಿ ತಯಾರಿಯ ಬಗ್ಗೆ ವಿವರವಾಗಿ ಚರ್ಚಿಸಿದರು.
ಪುಲ್ಕೇರಿ ಬೈಪಾಸ್ ಸರ್ಕಲ್ ನಿಂದ ಸಾಣೂರು ಪೇಟೆಯವರೆಗೆ ಅಗತ್ಯವಾಗಿ ಆಗಬೇಕಾಗಿರುವ ಸರ್ವಿಸ್ ರೋಡ್, ಗ್ರಾಮದ ವಿವಿಧಡೆ ತೆರವುಗೊಳಿಸಿರುವ ಬಸ್ಸು ತಂಗುದಾಣ ಮತ್ತು ರಿಕ್ಷಾ ತಂಗುದಾಣ ಗಳನ್ನು ಜನರಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿಯ ಎರಡು ಬದಿ ಕಡಿತಗೊಂಡಿರುವ ಕುಡಿಯುವ ನೀರಿನ ಪೈಪ್ ಲೈನ್ ಗಳ ಸ್ಥಾಪನೆ, ಬೀದಿ ದೀಪಗಳ ವ್ಯವಸ್ಥೆ, ಹೆದ್ದಾರಿಯ ಇಕ್ಕೆಲಗಳಲ್ಲಿ ಸಾಲುಮರಗಳನ್ನು ಬೆಳೆಸುವುದಕ್ಕಾಗಿ ಸಸ್ಯಾರೋಪಣೆ, ಗ್ರಾಮದ ವಿವಿದೆಡೆ ಗುಡ್ಡಜರಿದಿರುವ ಭಾಗಕ್ಕೆ ತುರ್ತಾಗಿ ಸುರಕ್ಷಿತ ತಡೆಗೋಡೆಗಳ ನಿರ್ಮಾಣ, ಗ್ರಾಮದ 12 ಪ್ರಮುಖ ಅಡ್ಡರಸ್ತೆಗಳ ಡಾಮರೀಕರಣ, ಸಾಣೂರು ಪದವಿ ಪೂರ್ವ ವಿದ್ಯಾಲಯಕ್ಕೆ ಹೋಗುವ ರಸ್ತೆಯ ಅಭಿವೃದ್ಧಿ ಡಾಮರೀಕರಣ ಮತ್ತು ಚರಂಡಿ ನಿರ್ಮಾಣ, ನೂತನವಾಗಿ ನಿರ್ಮಿಸಿರುವ ತಡೆಗೋಡೆಯ ತಳಪಾಯವನ್ನು ಭದ್ರ ಗಳಿಸುವುದು, ತಡೆಗೋಡೆಯ ಪಕ್ಕದಲ್ಲಿ ನೆಟ್ಟಿರುವ ವಿದ್ಯುತ್ ಕಂಬಗಳು ಅತಿ ಕೆಳ ಹಂತದಲ್ಲಿದ್ದು ಅದನ್ನು ಸುರಕ್ಷಿತ ಎತ್ತರಕ್ಕೆ ಎತ್ತರಿಸುವುದು, ತಡೆಗೋಡೆಗಳ ಮೇಲ್ಭಾಗಕ್ಕೆ ಉದ್ದಕ್ಕೂ ಸುರಕ್ಷಾ ಗ್ರಿಲ್ ಗಳ ಅಳವಳಿಕೆ, ಕಾಲೇಜು ಕಟ್ಟಡದ ಹಿಂಭಾಗದ ಗುಡ್ಡದ ಮಣ್ಣನ್ನು ತೆರವುಗೊಳಿಸುವುದು, ಆಟದ ಮೈದಾನದ ಸುತ್ತಲೂ ಬಿದ್ದಿರುವ ಹೆಚ್ಚುವರಿ ಮಣ್ಣನ್ನು ಹೊರಗೆ ಸಾಗಿಸುವುದು, ಸರಕಾರಿ ಪದವಿ ಪೂರ್ವ ಕಾಲೇಜಿನ ಜಾಗದ ಪರಿಹಾರ ಧನ, ಕೆಡವಿರುವ ಪ್ರವೇಶ ದ್ವಾರ ಮತ್ತು ಬಸ್ಸು ತಂಬುದಾಣದ ಪರಿಹಾರ ಅಥವಾ ಪುನರ್ ನಿರ್ಮಾಣ ಹಾಗೂ ಕೆಡವಿರುವ ಪಶು ಚಿಕಿತ್ಸಾಲಯದ ಪರಿಹಾರ ಧನವನ್ನು ಆದಷ್ಟು ಶೀಘ್ರವಾಗಿ ವಿತರಿಸುವುದು ಮೊದಲಾದ ಪ್ರಮುಖ ಬೇಡಿಕೆಗಳ ಜೊತೆಗೆ ಇನ್ನಿತರ ಹಲವಾರು ಅಗತ್ಯ ಕಾಮಗಾರಿಗಳ ಬಗ್ಗೆ ಡಿಸಿ ನೇತೃತ್ವದ ಸಭೆಯಲ್ಲಿ ಬೇಡಿಕೆ ಪಟ್ಟಿಯನ್ನು ಸಲ್ಲಿಸುವುದೆಂದು ನಿರ್ಣಯಿಸಲಾಯಿತು.
ಸಾಣೂರು ಗ್ರಾಮದ ವಿವಿಧಡೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಸಂದರ್ಭದಲ್ಲಿ ಆಗಿರುವ ತೊಂದರೆ ಮತ್ತು ಅಗತ್ಯ ಕಾಮಗಾರಿಗಳ ಬಗ್ಗೆ ವಿಡಿಯೋ ಚಿತ್ರೀಕರಣ ಮಾಡಿ ಸ್ಥಳೀಯರ ಅಭಿಪ್ರಾಯಗಳನ್ನು ದಾಖಲಿಸಿ ಡಿಸಿ ನೇತೃತ್ವದ ಸಭೆಯಲ್ಲಿ ಪ್ರಸಾರ ಮಾಡುವುದೆಂದು ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಾಣೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಯಶೋಧ ವಿ ಶೆಟ್ಟಿ, ಪಂಚಾಯತ್ ಸದಸ್ಯರುಗಳಾದ ಪ್ರಸಾದ್ ಪೂಜಾರಿ, ಸತೀಶ್ ಪೂಜಾರಿ,ಶ್ರೀಮತಿ ಸರಸ್ವತಿ, ಶ್ರೀಮತಿ ಪ್ರಮೀಳ, ಸಾಣೂರು ಯುವಕ ಮಂಡಲದ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ ಮತ್ತು ಪದಾಧಿಕಾರಿಗಳಾದ ಕೊಲ್ದುರೊಟ್ಟು ಶಂಕರ ಶೆಟ್ಟಿ, ರಾಜೇಶ್, ಶ್ರೀ ಬಾಲಾಂಜನೇಯ ಯುವಕ ಸಂಘದ ಅಧ್ಯಕ್ಷರಾದ ಶ್ರೀ ಮಾಧವ ಭಂಡಾರ್ಕರ್, ಸಾಣೂರು ಪದವಿ ಪೂರ್ವ ವಿದ್ಯಾಲಯದ ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಶ್ರೀ ಅಶೋಕ್ ಶೆಟ್ಟಿ, ಉದ್ಯಮಿಗಳಾದ ಶ್ರೀ ಸತೀಶ್ ನಾಯಕ್, ನಿವೃತ್ತ ಉಪನ್ಯಾಸಕರಾದ ಶ್ರೀ ಪುರುಷೋತ್ತಮ ಗೌಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇವಾ ಪ್ರತಿನಿಧಿ ಶ್ರೀಮತಿ ಅರುಣಿ, ಶಕ್ತಿ ಸಮೃದ್ಧಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಗೀತಾದೇವಾಡಿಗ, ನಿಕಟಪೂರ್ವ ಅಧ್ಯಕ್ಷರಾದ ಜಯಲಕ್ಷ್ಮಿ ಶೆಟ್ಟಿಗಾರ್, ಎಲ್ ಸಿ ಆರ್ ಪಿ ಗಳಾದ ಶ್ರೀಮತಿ ಜಯಶ್ರೀ ,ಶ್ರೀಮತಿ ಶ್ವೇತಾ ದೇವಾಡಿಗ, ಪಂಚಾಯತ್ ಡಾಟಾ ಆಪರೇಟರ್ ಶ್ರೀಮತಿ ಸವಿತಾ ಉಪಸ್ಥಿತರಿದ್ದರು.