ಕೊಲ್ಲೂರು :ಜೂನ್ 29: ಇಲ್ಲಿನ ಬೆಳ್ಳಾಲ ಗ್ರಾಮದ ನಂದ್ರೊಳಿಯಲ್ಲಿ ಕೆರೆಯಲ್ಲಿ ಮುಳುಗಿ ಮಕ್ಕಳಿಬ್ಬರು ಸಾವನ್ನಪ್ಪಿದ ಅವಘಡ ಶನಿವಾರ ಮಧ್ಯಾಹ್ನ ನಡೆದಿದೆ. ಮಕ್ಕಳನ್ನು ರಕ್ಷಿಸಲು ಹೋಗಿದ್ದ ತಾಯಿಯನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ
ಮೃತ ದುರ್ದೈವಿ ಮಕ್ಕಳು ಚಿಕ್ಕನಕಟ್ಟು ನಿವಾಸಿ ಗಳಾದ ಧನ್ ರಾಜ್(13), ಛಾಯಾ (7) ಎನ್ನುವವರಾಗಿದ್ದಾರೆ. ತಾಯಿ ಶೀಲಾ ಮಡಿವಾಳ (40) ಸ್ಥಿತಿ ಗಂಭೀರವಾಗಿದೆ. ಇಬ್ಬರು ಮಕ್ಕಳು ವಂಡ್ಸೆ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಾಗಿದ್ದರು.ಶೀಲಾ ಅವರ ಪತಿ ಸತೀಶ್ ಮಡಿವಾಳ ವಿಜಯಪುರ ದಲ್ಲಿ ಹೋಟೆಲ್ ಕಾರ್ಮಿಕರಾಗಿದ್ದಾರೆ.
ಮನೆ ಹತ್ತಿರದಲ್ಲೇ ಇದ್ದ ಕೆರೆಯಲ್ಲಿ ಛಾಯಾ ಕಾಲು ಜಾರಿ ಬಿದ್ದಾಗ ರಕ್ಷಿಸಲು ಧನ್ ರಾಜ್ ಹೋಗಿದ್ದು ಇಬ್ಬರೂ ಮುಳುಗಿದ್ದಾರೆ. ಆ ಬಳಿಕ ತಾಯಿ ಮಕ್ಕಳ ರಕ್ಷಣೆಗೆಂದು ಹೋಗಿ ನೀರಿನಲ್ಲಿ ಮುಳುಗಿದ್ದಾರೆ. ರಸ್ತೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಕೃಷಿ ಇಲಾಖೆಯ ಅಧಿಕಾರಿಗಳು ದೃಶ್ಯ ಕಂಡು ಸ್ಥಳೀಯರನ್ನು ಕರೆದು ಶೀಲಾ ಅವರನ್ನು ರಕ್ಷಿಸಿದ್ದಾರೆ. ಮಕ್ಕಳಿಬ್ಬರು ಅದಾಗಲೇ ಪ್ರಾಣ ಕಳೆದುಕೊಂಡಿದ್ದರು.
ಶೀಲಾ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಿತಿ ಗಂಭೀರವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದರು ಹೇಳಿದ್ದಾರೆ.