ಹೇರಂಜಾಲು(ಉಡುಪಿ) : ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ನಾನು ನೋಡಿದ ದಿಟ್ಟ ಮಹಿಳೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್. ಮಾರ್ಡನ್ ಇಂದಿರಾ ಗಾಂಧಿ ಸ್ವರೂಪ ಹೊಂದಿರುವವರು ಅವರು. ಹತ್ತು ಜನ ಪುರುಷ ರಾಜಕಾರಣಿಗಳ ಶಕ್ತಿ ಅವರಿಗಿದೆ ಎಂದು ಗೌರಿಗದ್ದೆ ಆಶ್ರಮದ ಅವಧೂತರಾದ ವಿನಯ್ ಗುರೂಜಿ ಶ್ಲಾಘಿಸಿದರು.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಹೇರಂಜಾಲುವಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶೆಫ್ ಟಾಕ್ ನ್ಯೂಟ್ರಿಫುಡ್ಸ್ ಪ್ರೈವೇಟ್ ಲಿಮಿಟೆಡ್ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಮಾತನಾಡಿದ ಅವರು, ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಕಾರ್ಯವೈಖರಿಯನ್ನು ಹೊಗಳಿದರು.
ಸಚಿವರ ಕಾಳಜಿಯಿಂದಲೇ ಕರ್ನಾಟಕ ಸರ್ಕಾರದ ಬಹುನಿರೀಕ್ಷಿತ ಯೋಜನೆ ಗೃಹಲಕ್ಷ್ಮಿ ಇಂದು ಮನೆ ಮನೆಗೆ ತಲುಪುತ್ತಿದೆ. ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೇ ಇಂದು ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೇರಿದ್ದಾರೆ. ಅವರ ಆಡಳಿತ ವೈಖರಿ ಇತರರಿಗೂ ಮಾದರಿಯಾಗಿದೆ ಎಂದು ವಿನಯ್ ಗುರೂಜಿ ಹೇಳಿದರು.
ಮನುಷ್ಯ ಕಷ್ಟಪಟ್ಟು ಮುಂದೆ ಬಂದಿದ್ದರಷ್ಟೇ ಆತನಿಗೆ ಕಷ್ಟಪಟ್ಟವರ ಬೆಲೆ ಗೊತ್ತಿರುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಉದ್ಯಮಗಳು ಸ್ಥಾಪನೆಯಾಗಬೇಕು. ಇಂಥ ಉದ್ಯಮಿಗಳನ್ನು ಬೆಂಬಲಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಫ್ಯಾಕ್ಟರಿ ಉದ್ಘಾಟಿಸಿದ್ದು ನನಗೆ ತುಂಬಾ ಖುಷಿ ನೀಡಿತು. ಫ್ಯಾಕ್ಟರಿ ಕಟ್ಟೋದು ಅಷ್ಟು ಸುಲಭವಲ್ಲ, ಇದಕ್ಕೆ ಅಡ್ಡಿಪಡಿಸೋರೆ ಜಾಸ್ತಿ. ಪುಟ್ಟ ಹಳ್ಳಿಯಿಂದ ದೆಹಲಿವರೆಗೂ ಉದ್ಯಮ ಹೊಂದಿರುವ ಗೋವಿಂದ ಪೂಜಾರಿ ಅವರ ಸಾಧನೆ ನಿಜಕ್ಕೂ ಮೆಚ್ಚುವಂತದ್ದು ಎಂದರು.
ಈ ವೇಳೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸದಸ್ಯರಾದ ಕೋಟಾ ಶ್ರೀನಿವಾಸ್ ಪೂಜಾರಿ, ಶೆಫ್ ಟಾಕ್ ನ್ಯೂಟ್ರಿ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಮಾಲೀಕರಾದ ಗೋವಿಂದ ಬಾಬು ಪೂಜಾರಿ, ರಾಜು ಪೂಜಾರಿ, ವಿಜಯ್ ಶೆಟ್ಟಿ, ಸಂಜೀವ್, ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಾಗಮ್ಮ ದೇವಾಡಿಗ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.