ಕಲ್ಲಡ್ಕ :ಜೂನ್ 24: ಬಿ.ಸಿ.ರೋಡ್-ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಭಾಗವಾಗಿ ಕಲ್ಲಡ್ಕದಲ್ಲಿ ನಿರ್ಮಾಣಗೊಳ್ಳುವ ಫ್ಲೈಓವರ್ ಕಾಮಗಾರಿಯಿಂದ ಹೆದ್ದಾರಿ ಅವ್ಯವಸ್ಥೆ ಮುಂದುವರಿದಿದ್ದು, ರವಿವಾರ ಮಧ್ಯಾಹ್ನದ ಬಳಿಕ ಸುರಿದ ಧಾರಾಕಾರ ಮಳೆಯಿಂದಾಗಿ ಕಲ್ಲಡ್ಕದ ಸರ್ವೀಸ್ ರಸ್ತೆಯಲ್ಲಿ ಕೃತಕ ನೆರೆ ಸೃಷ್ಟಿಯಾಗಿತ್ತು.
ಮಳೆ ನೀರು ಹರಿಯಲು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಇಲ್ಲಿ ನಿರಂತರ ಸಮಸ್ಯೆಯಾಗುತ್ತಿದ್ದು, ರವಿವಾರ ಕೊಂಚ ಹೆಚ್ಚೇ ಮಳೆ ಸುರಿದ ಪರಿಣಾಮ ವಾಹನಗಳು ನೀರಿನಲ್ಲೇ ಸಂಚರಿಸುವಂತಾಗಿತ್ತು. ಸಣ್ಣ ವಾಹನಗಳ ಚಕ್ರಗಳು ಪೂರ್ತಿ ಮುಳುಗುವಷ್ಟರ ಮಟ್ಟಿಗೆ ರಸ್ತೆಯಲ್ಲಿ ನೀರು ಸಂಗ್ರಹವಾಗಿತ್ತು.
ಹೆದ್ದಾರಿ ಕಾಮಗಾರಿ ಪ್ರಾರಂಭವಾದಂದಿನಿಂಲೂ ಸಂಚಾರ ನಿರಂತರ ತೊಂದರೆಯಾಗುತ್ತಿದೆ. ಜಿಲ್ಲೆಯ ಶಾಸಕರು, ಉಸ್ತುವಾರಿ ಸಚಿವರು, ನೂತನ ಸಂಸದರು ಜನರಿಗೆ ತೊಂದರೆಯಾಗದ ರೀತಿಯಲ್ಲಿ ಕಾಮಗಾರಿ ನಿರ್ವಹಿಸುವಂತೆ ಪದೇಪದೆ ಸೂಚನೆ ನೀಡಿದ್ದು, ಸ್ವತಃ ದ.ಕ.ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ ಸಮರ್ಪಕ ಕಾಮಗಾರಿ ನಿರ್ವಹಣೆಗೆ ನಿರ್ದೇಶನ ನೀಡಿದರೂ ಸಮಸ್ಯೆ ಯಥಾಸ್ಥಿತಿಯಲ್ಲೇ ಇದೆ ಎನ್ನುವುದಕ್ಕೆ ರವಿವಾರದ ಕೃತಕ ನೆರೆ ಸಾಕ್ಷಿಯಾಯಿತು.