ಮಂಗಳೂರು: ಜೂನ್ 24: ಜಿಲ್ಲಾದ್ಯಂತ ರೆಡ್ ಅಲರ್ಟ್ ಮುನ್ಸೂಚನೆಯಿದ್ದು, ವ್ಯಾಪಕ ಮಳೆಯಾಗುವ ಸಾಧ್ಯತೆ ಇರುವುದರಿಂದ ಮಳೆಯ ಸಂದರ್ಭದಲ್ಲಿ ಸಂಭವಿಸಬಹುದಾದ ಅನೀರಿಕ್ಷಿತ ಅನಾಹುತಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ.
ಜೂನ್ 26ರವರೆಗೆ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಪ್ರಾಕೃತಿಕ ವಿಕೋಪ ನಿಭಾಯಿಸಲು ಪ್ರತಿ ತಾಲೂಕು ಕೇಂದ್ರಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಆರಂಭಿಸಿದೆ.
ಅಗತ್ಯವಿದ್ದಲ್ಲಿ ತಾಲ್ಲೂಕು ಕೇಂದ್ರಗಳಲ್ಲಿ ಕಾಳಜಿ ಕೇಂದ್ರ ಸ್ಥಾಪಿಸುವುದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಬೇಕು. ಜಿಲ್ಲಾಡಳಿತವು ನೇಮಿಸಿರುವ ಇನ್ಸಿಡೆಂಟ್ ಕಮಾಂಡರ್‌ಗಳು ಸದಾ ಸನ್ನದ್ಧವಾಗಿದ್ದು, ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಬೇಕು. ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿ ಜೊತೆ ನಿರಂತರ ಸಂಪರ್ಕದಲ್ಲಿರಬೇಕು. ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರಸ್ಥಾನವನ್ನು ತೊರೆಯುವಂತಿಲ್ಲ ಎಂದು ಪ್ರಾಧಿಕಾರ ಸೂಚಿಸಿದೆ.
ಮೀನುಗಾರರು ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಬಾರದು. ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿರುವ ದೋಣಿಗಳು ತಕ್ಷಣ ದಡಕ್ಕೆ ಮರಳಬೇಕು. ಪ್ರವಾಸಿಗರು ನದಿ ಅಥವಾ ಸಮುದ್ರ ತೀರಕ್ಕೆ ತೆರಳಬಾರದು. ತಗ್ಗು ಪ್ರದೇಶ, ಕೆರೆ, ನದಿ ಅಥವಾ ಸಮುದ್ರಕ್ಕೆ ಮಕ್ಕಳು ತೆರಳದಂತೆ ಪೋಷಕರು ಎಚ್ಚರ ವಹಿಸಬೇಕು ಎಂದು ಪ್ರಾಧಿಕಾರ ಸಲಹೆ ನೀಡಿದೆ.
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಪ್ರಾಕೃತಿಕ ವಿಕೋಪದ ಸಮಸ್ಯೆಗಳಿಗೆ ಪಾಲಿಕೆಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ. ದೂರವಾಣಿ ಸಂಖ್ಯೆ 0824 -2220306 ಅಥವಾ ವಾಟ್ಸಾಪ್ ಸಂಖ್ಯೆ 9449007722 ಸಂಪರ್ಕಿಸಿ ಸಾರ್ವಜನಿಕರು ಮಳೆಯಿಂದ ಉಂಟಾದ ಯಾವುದೇ ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ ಎಂದು ಮಹಾನಗರಪಾಲಿಕೆ ಪ್ರಕಟಣೆ ತಿಳಿಸಿದೆ.