ಶಿವಮೊಗ್ಗ : ಜೂನ್ 19: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಸಾಗರದ ಸಿಗಂದೂರು ಚೌಡೇಶ್ವರಿ ಸನ್ನಿದಾನಕ್ಕೆ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿತ ಹಿನ್ನೆಲೆಯಲ್ಲಿ ಸಿಗಂದೂರು ಲಾಂಚ್‌ನಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಸದ್ಯಕ್ಕೆ ಲಾಂಚ್‌ನಲ್ಲಿ ಬೈಕ್ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಮಳೆ ಕೊರತೆ ಮುಂದುವರಿದ ಹಿನ್ನೆಲೆಯಲ್ಲಿ ಶಿವಮೊಗ್ಗದ ಸಾಗರ ತಾಲೂಕಿನ ಶರಾವತಿ ಹಿನ್ನೀರು ಭಾಗದಲ್ಲಿರುವ ಲಾಂಚ್ ಸಂಚಾರ ಸೇವೆ ಸ್ಥಗಿತವಾಗಿದೆ. ಎರಡು ಬದಿಯಲ್ಲಿ ಪ್ಲಾಟ್ ಫಾರ್ಮ್‌ಕ್ಕಿಂತ ನೀರು ಕಡಿಮೆ ಆದ ಹಿನ್ನೆಲೆಯಲ್ಲಿ ಸಂಚಾರ ನಿರ್ಬಂಧ ಮಾಡಲಾಗಿದೆ. ಮಳೆ ಬಾರದೆ ಇದ್ದರೆ 16 ದಿನದಲ್ಲಿ ಸಂಪೂರ್ಣವಾಗಿ ಎಲ್ಲ ವಾಹನಗಳು ಹಾಗೂ ಸಾರ್ವಜನಿಕ ಪ್ರವೇಶವು ಬಂದ್ ಆಗಲಿದೆ ಎನ್ನಲಾಗಿದೆ.
ಶರಾವತಿ ಹಿನ್ನೀರು ಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಈ ಲಾಂಚ್ ಸಂಪರ್ಕ ಕಲ್ಪಿಸಲಿದೆ. ಜತೆಗೆ ಸಾಗರ ತಾಲೂಕಿನ ಕಳಸವಳ್ಳಿ ಮತ್ತು ಅಂಬರಗೋಡ್ಲು, ಕರೂರು, ಬಾರಂಗಿ ಹೋಬಳಿಯ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಲಾಂಚ್ ಇದಾಗಿದೆ. ಲಾಂಚ್ ಸಂಪೂರ್ಣ ಸ್ಥಗಿತಗೊಂಡರೆ 90 ಕಿಲೋ ಮೀಟರ್ ಸುತ್ತಿ ಪ್ರಯಾಣಿಸುವ ಅನಿವಾರ್ಯತೆ ಇದೆ. ಇತ್ತ ಭಾರಿ ವಾಹನ ನಿರ್ಬಂಧದಿಂದ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ.