ಉಡುಪಿ:ಜೂನ್ 15: ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾಗಿರುವ ನ್ಯಾಯವಾದಿಗಳು ಮಕ್ಕಳ ವಿರುದ್ಧ ಪ್ರಕರಣಗಳನ್ನು ತೆಗೆದು ಕೊಳ್ಳುತ್ತಿರುವ ಕುರಿತು ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣ ಆಯೋಗವು ಬೆಂಗಳೂರು ಮಕ್ಕಳ ರಕ್ಷಣ ನಿರ್ದೇಶನಾಲಯಕ್ಕೆ ಸೂಚನೆ ನೀಡಿದೆ.
ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರೊಬ್ಬರು ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟ ಬಾಲಕಿಯ ಪ್ರಕರಣದಲ್ಲಿ ಆರೋಪಿ ಪರವಾಗಿ ವಕಾಲತ್ತು ಸಲ್ಲಿಸಿ, ನ್ಯಾಯಾಲಯದಲ್ಲಿ ಜಾಮೀನು ಕೊಡಿಸಲು ಪ್ರಯತ್ನಿಸುತ್ತಿದ್ದಾರೆ. ಅವರ ಮೇಲೆ ಅಗತ್ಯ ಕ್ರಮ ಕೈಗೊಳ್ಳುವಂತೆ ಬಾಲಕಿಯ ತಂದೆ ಆಯೋಗಕ್ಕೆ ಮನವಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿಯು ಸಂತ್ರಸ್ತ ಮಕ್ಕಳಿಗೆ ನ್ಯಾಯ ಒದಗಿಸುವ ಪ್ರಮುಖ ಸಂಸ್ಥೆಯಾಗಿದ್ದು, ಇಂತಹ ಜವಾಬ್ದಾರಿ ಸ್ಥಾನದಲ್ಲಿದ್ದುಕೊಂಡು ಆರೋಪಿ ಪರವಾಗಿ ವಕಾಲತ್ತು ಸಲ್ಲಿಸಿ, ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಪಡೆದು ಕೊಂಡು ಪ್ರಕರಣಕ್ಕೆ ಹಿನ್ನಡೆ ಉಂಟಾ ಗುತ್ತದೆ ಎಂದು ಆಯೋಗ ಅಭಿಪ್ರಾಯ ಪಟ್ಟಿದೆ. ಆದುದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆಯೋಗವು ಉಡುಪಿ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರೊಬ್ಬರ ಮೇಲೆ ನಿಯಮಾನುಸಾರ ಕಾನೂನು ರೀತಿಯ ಕ್ರಮ ಕೈಗೊಂಡು ಮೂರು ದಿನಗಳ ಒಳಗಾಗಿ ಆಯೋಗಕ್ಕೆ ವರದಿ ಸಲ್ಲಿಸುವಂತೆ ಆಯೋಗದ ಅಧ್ಯಕ್ಷರು ತಿಳಿಸಿದ್ದಾರೆ.