ಮಣಿಪಾಲ ಜೂನ್, 14, 2024 : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ] ಇದರ ವಿದ್ಯಾರ್ಥಿ ವ್ಯವಹಾರ [ಸ್ಟೂಡಂಟ್ಸ್ ಆಫೇರ್ಸ್] ವಿಭಾಗವು ‘ಅಪಾಯದಲ್ಲಿರುವ ಹಾಸ್ಟೆಲ್ ವಾಸಿಗಳನ್ನು ಗುರುತಿಸುವಲ್ಲಿ ಹಾಸ್ಟೆಲ್‌ನ ಪಾಲಕರನ್ನು ಸಜ್ಜುಗೊಳಿಸುವ’ [ಇಕ್ವಿಪ್ಪಿಂಗ್ ಕೇರ್‌ಟೇಕರ್ಸ್ ಟು ರೆಕಗ್ನೆಸ್ ಅಟ್-ರಿಸ್ಕ್ ಹಾಸ್ಟೆಲ್ ಇನ್‌ಮೇಟ್ಸ್] ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಮಾಹೆಯು ಹಾಸ್ಟೆಲ್ ವಾಸಿ ವಿದ್ಯಾರ್ಥಿಗಳ ಸುರಕ್ಷೆ ಮತ್ತು ಕ್ಷೇಮದ ಕುರಿತು ಬದ್ಧತೆಯನ್ನು ಹೊಂದಿರುವುದರ ದ್ಯೋತಕವಾಗಿದೆ. ಮಾಹೆಯ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳ ಸುರಕ್ಷೆಯನ್ನು ಕಾಪಾಡುವಲ್ಲಿ ಮತ್ತು ತೊಂದರೆಯಲ್ಲಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಕ್ಷೇಮಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಹಾಸ್ಟೆಲ್‌ನ ಉಸ್ತುವಾರಿಗಳನ್ನು ಜಾಗೃತಿಗೊಳಿಸುವಲ್ಲಿ ಈ ಕಾರ್ಯಕ್ರಮವು ಪ್ರಮುಖ ಹೆಜ್ಜೆಯಾಗಿದ್ದು 250 ಮಂದಿ ಇದರಲ್ಲಿ ಭಾಗವಹಿಸಿದ್ದರು.
ಮಾಹೆಯ ಸಹ-ಉಪಕುಲಪತಿಗಳಾದ ಡಾ. ನಾರಾಯಣ್ ಸಭಾಹಿತ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ‘ಮಾಹೆಯು ವಿದ್ಯಾರ್ಥಿಗಳ ಕಲಿಕೆಗೆ ಆದ್ಯತೆ ನೀಡುವಂತೆಯೇ ಅವರ ಸುರಕ್ಷೆಯ ಬಗ್ಗೆಯೂ ವಿಶೇಷ ಕಾಳಜಿ ವಹಿಸುತ್ತದೆ. ಈ ನಿಟ್ಟಿನಲ್ಲಿ ಹಾಸ್ಟೆಲ್‌ನ ಉಸ್ತುವಾರಿಗಳನ್ನು ವಿದ್ಯಾರ್ಥಿಗಳ ಕ್ಷೇಮಪಾಲನೆಯ ಕುರಿತು ತರಬೇತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ’ ಎಂದರು.
ಮುಖ್ಯ ರಕ್ಷಣಾಧಿಕಾರಿ [ಚೀಫ್ ಸೆಕ್ಯುರಿಟಿ ಆಫೀಸರ್] ಕ. ವಿಜಯ ಭಾಸ್ಕರ ರೆಡ್ಡಿ ಅವರು ಕಾಲೇಜು ಆವರಣದಲ್ಲಿ ಸುರಕ್ಷೆ [ಕ್ಯಾಂಪರ್ ಸೆಕ್ಯುರಿಟಿ] ಗೆ ಸಂಬಂಧಿಸಿ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತ, ‘ಅಪಾಯದಲ್ಲಿರುವ ವಿದ್ಯಾರ್ಥಿಗಳನ್ನು ಪಾರು ಮಾಡುವುದು ಅತ್ಯಂತ ಆವಶ್ಯಕ ಕ್ರಮವಾಗಿದೆ. ವಿದ್ಯಾರ್ಥಿನಿಲಯದಲ್ಲಿ ತಾವು ಕ್ಷೇಮವಾಗಿದ್ದೇವೆ ಎಂಬ ಭರವಸೆಯನ್ನು ಅವರಲ್ಲಿ ಮೂಡಿಸಬೇಕಾಗಿದೆ’ ಎಂದರು.
ನ್ಯಾಯವಾದಿ ಲತಾ ಹೊಳ್ಳ ಅವರು ‘ಲೈಂಗಿಕ ಕಿರುಕುಳವನ್ನು ತಡೆಗಟ್ಟುವಿಕೆ’ ಎಂಬ ವಿಷಯದಲ್ಲಿ ಮಾತನಾಡುತ್ತ, ದೌರ್ಜನ್ಯದಂಥ ವಿಷಯಗಳನ್ನು ಹಾಸ್ಟೆಲ್‌ನ ಪಾಲಕರು ಸರಿಯಾದ ಸಮಯಕ್ಕೆ ಅರಿತುಕೊಂಡು ಕ್ರಮ ಕೈಗೊಳ್ಳಬೆಕು’ ಎಂದರು.
ವಿದ್ಯಾರ್ಥಿ ವ್ಯವಹಾರ ವಿಭಾಗ [ಸ್ಟೂಡೆಂಟ್ ಅಫೇರ್ಸ್] ದ ನಿರ್ದೇಶಕರಾದ ಡಾ. ಗೀತಾ ಮಯ್ಯ ಸ್ವಾಗತಿಸಿದರು. ವಿದ್ಯಾರ್ಥಿ ಆಪ್ತಸಲಹಾಕಾರ [ಸ್ಟೂಡೆಂಟ್ ಕೌನ್ಸಿಲರ್] ಕೆಲ್ವಿನ್ ಅವರು ಕಾರ್ಯಕ್ರಮ ನಿರ್ವಹಿಸಿದರು. ಹಿರಿಯ ವಿದ್ಯಾರ್ಥಿ ಆಪ್ತಸಲಹಾಕಾರ [ಸೀನಿಯರ್ ಸ್ಟೂಡೆಂಟ್ ಕೌನ್ಸಿಲರ್] ಡಾ. ರಾಯನ್ ಮಥಾಯಸ್ ಧನ್ಯವಾದ ಸಮರ್ಪಿಸಿದರು.