ನವದೆಹಲಿ : ಜೂನ್ 09:ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮುರವರು ಪ್ರಮಾಣ ವಚನ ಭೋಧಿಸಲಿದ್ದಾರೆ.
ಇದೀಗ ಈ ಕಾರ್ಯಕ್ರಮಕ್ಕೆ ಉಡುಪಿ ಮಠದ ಪೇಜಾವರ ಶ್ರೀಗಳಿಗೆ ಪ್ರಧಾನಿ ಕಛೇರಿಯಿಂದ ಆಹ್ವಾನ ನೀಡಲಾಗಿದೆ. ನಿನ್ನೆ(ಜೂ.08) ಸಂಜೆ ಪಿಎಂಒ ನಿಂದ ಉಡುಪಿ ಪೇಜಾವರ ಸ್ವಾಮೀಜಿಗಳಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಕರೆ ಬಂದಿದೆ ಎನ್ನಲಾಗಿದೆ
ತಡರಾತ್ರಿ ಪ್ರಧಾನಮಂತ್ರಿ ಕಚೇರಿಯಿಂದ ಕರೆ ಮಾಡಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಗೆ ಆಹ್ವಾನ ಮಾಡಲಾಗಿದೆ. ಕೆಂಪೇಗೌಡ ಏರ್ಪೋರ್ಟ್ನಿಂದ ದೆಹಲಿಗೆ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತೆರಳಲಿದ್ದಾರೆ. ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದ್ದು, ಈಗಾಗಲೇ ಸಿದ್ಧತೆ ಪೂರ್ಣಗೊಂಡಿದೆ. ಏಳು ವಿದೇಶಿ ನಾಯಕರು ಸೇರಿದಂತೆ ಒಟ್ಟು 8,000 ಗಣ್ಯರು ಉಪಸ್ಥಿತರಿರಲಿದ್ದಾರೆ. ಇನ್ನು ಗಣ್ಯರಲ್ಲಿ ವಿವಿಧ ವೃತ್ತಿಪರರು, ಸಾಂಸ್ಕೃತಿಕ ಕಲಾವಿದರು ಸೇರಿದ್ದಾರೆ. ಸಂಜೆ 7:31ರ ಹೊತ್ತಿಗೆ ನರೇಂದ್ರ ಮೋದಿ ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ.
ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸುವ ಮೊದಲು ಮಹಾತ್ಮ ಗಾಂಧೀಜಿ ಅವರ ಸಮಾಧಿಸ್ಥಳವಾದ ರಾಜ್‌ಘಾಟ್‌ಗೆ ತೆರಳಿ ನಮನ ಸಲ್ಲಿಸಲಿದ್ದಾರೆ. ಇದಾದ ನಂತರ ತಮ್ಮ ರಾಜಕೀಯ ಗುರುವಾದ ಅಟಲ್ ಬಿಹಾರಿ ವಾಜಪೇಯಿ ಅವರ ಸಮಾಧಿ ಸ್ಥಳವಾದ ಸದೈವ ಅಟಲ್‌ಗೆ ಭೇಟಿ ನೀಡಿ, ಅವರಿಗೆ ಪುಷ್ಪನಮನ ಸಲ್ಲಿಸಲಿದ್ದಾರೆ.
7 ವಿದೇಶಿ ನಾಯಕರ ಉಪಸ್ಥಿತಿ
ಕಾರ್ಯಕ್ರಮದಲ್ಲಿ ಭಾರತದ ಏಳು ನೆರೆಯ ರಾಷ್ಟ್ರಗಳ ನಾಯಕರು ಭಾಗಿಯಾಗಲಿದ್ದಾರೆ. ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು, ಸೆಶೆಲ್ಸ್‌ನ ಉಪಾಧ್ಯಕ್ಷ ಅಹ್ಮದ್ ಅಫೀಫ್; ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ; ಮಾರಿಷಸ್‌ನ ಪ್ರಧಾನ ಮಂತ್ರಿ, ಪ್ರವಿಂದ್ ಕುಮಾರ್ ಜುಗ್ನೌತ್; ನೇಪಾಳದ ಪ್ರಧಾನಿ, ಪುಷ್ಪ ಕಮಲ್ ದಹಲ್ ‘ಪ್ರಚಂಡ’ ಮತ್ತು ಭೂತಾನ್ ಪ್ರಧಾನಿ, ತ್ಶೆರಿಂಗ್ ಟೊಬ್ಗೇ ಉಪಸ್ಥಿತರಿರಲಿದ್ದಾರೆ